ದೇಶಾದ್ಯಂತ ಪಿಎಫ್​ಐ, ಎಸ್​ಡಿಪಿಐ ಕಚೇರಿಗಳ ಮೇಲೆ ಎನ್​ಐಎ ದಾಳಿ

ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್​ಐಎ ತನಿಖೆ ನಡೆಸುತ್ತಿದೆ. 

ರಾಷ್ಟ್ರೀಯ ತನಿಖಾ ದಳ(NIA) ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್​ಐ ಕಚೇರಿ( PFI) ಮೇಲೆ ಗುರುವಾರ ನಸುಕಿನ 3.30ರ ವೇಳೆಯಲ್ಲಿ ದಾಳಿ ನಡೆಸಿದೆ. ಶಸ್ತ್ರಸಜ್ಜಿತ ಕೇಂದ್ರೀಯ ಪಡೆಗಳೊಂದಿಗೆ ಸ್ಥಳಕ್ಕೆ ಬಂದಿರುವ ಅಧಿಕಾರಿಗಳು ಇದೀಗ ಕಚೇರಿಗೆ ಪ್ರವೇಶಿಸಿದ್ದಾರೆ. ದಾಳಿಯ ನಿಖರ ಕಾರಣ ತಿಳಿದುಬಂದಿಲ್ಲ. ಕೇರಳ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಇರುವ ಎಸ್​ಡಿಪಿಐ ಕಚೇರಿಗಳ ( SDPI) ಮೇಲೆಯೂ ದಾಳಿ ನಡೆದಿದೆ. ಎಸ್​ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕರ್ ಕುಳಾಯಿ ಸೋದರನ ಮನೆಗೂ ಅಧಿಕಾರಿಗಳು ಪ್ರವೇಶಿಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್​ಐಎ ತನಿಖೆ ನಡೆಸುತ್ತಿದೆ. ಮಂಗಳೂರಿನ ಸ್ಥಳೀಯ ಪೊಲೀಸರು ಸಹ ರಸ್ತೆಯಲ್ಲಿ ಉಪಸ್ಥಿತರಿದ್ದು ಭದ್ರತೆ ಒದಗಿಸಿದ್ದಾರೆ.

ಎನ್​ಐಎ ದಾಳಿ ಖಂಡಿಸಿ ಪಿಎಫ್​ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೆಲ್ಲಿಕಾಯಿ ರಸ್ತೆಯಲ್ಲಿ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಅರೆಮೀಸಲು ಪಡೆಯಿಂದ ಕಟ್ಟೆಚ್ಚರ ವಹಿಸಲಾಗಿದೆ.


ಕೇರಳದಲ್ಲಿ ಎನ್​ಐಎ ದಾಳಿ

ಕೇರಳದ ಮಾಂಜೇರಿ, ಮಲಪ್ಪುರಂ ಜಿಲ್ಲಾ ಪಿಎಫ್​ಐ ಘಟಕಗಳ ಅಧ್ಯಕ್ಷ ಒ.ಎಂ.ಎ.ಸಲ್ಮಾನ್ ಮತ್ತು ಇತರರ ಮನೆಗಳು ಹಾಗೂ ಪಿಎಫ್​ಐ ಕಚೇರಿಗಳ ಮೇಲೆ ಎನ್​ಐಎ ದಾಳಿ ನಡೆಸಿದೆ. ಎನ್​ಐಎ ದಾಳಿ ವಿರೋಧಿಸಿ ಪಿಎಫ್​ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಭಯೋತ್ಪಾದಕರಿಗೆ ಹಣದ ನೆರವು ಒದಗಿಸುವುದು, ತರಬೇತಿ ಶಿಬಿರ ಆಯೋಜನೆ ಮತ್ತು ಸಾರ್ವಜನಿಕರನ್ನು ಉಗ್ರಗಾಮಿ ಸಂಘಟನೆಗಳಿಗೆ ಸೇರ್ಪಡೆಗೊಳ್ಳಲು ಮನವೊಲಿಸುವುದು ಸೇರಿದಂತೆ ಹಲವು ಆಯಾಮದಲ್ಲಿ ತನಿಖೆ ನಡೆಯುತ್ತಿದೆ.

ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರ ರಾತ್ರಿ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಕಾರ್ಯಕರ್ತರ ತೀವ್ರ ಒತ್ತಾಯದ ನಂತರ ಪ್ರಕರಣದ ತನಿಖೆಯನ್ನು ಎನ್ಐಎ ಗೆ ವಹಿಸಲಾಯಿತು. ತನಿಖೆ ಆರಂಭಿಸಿರುವ ಅಧಿಕಾರಿಗಳು ಸೆ 6ರಂದು ಸುಳ್ಯ ಹಾಗೂ ಪುತ್ತೂರು ತಾಲ್ಲೂಕಿನ 32 ಕಡೆಗಳಲ್ಲಿ ಮನೆಗಳು ಹಾಗು ಇತರೆ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದರು. ಇದೀಗ ಬಂಧಿತರಾಗಿರುವ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕಾರ ನೀಡಿದವರ ವಿಚಾರಣೆಯನ್ನೂ ಎನ್​ಐಎ ನಡೆಸುತ್ತಿದೆ

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.