ಸ್ವಾಸ್ಥ್ಯ ಸಮಾಜ ನಿರ್ಮಾಣದ ದೃಷ್ಟಿಯಿಂದ ಮಾದಕ ವಸ್ತುಗಳಿಂದ ಪ್ರತಿಯೊಬ್ಬರು ದೂರವಿರಬೇಕು : ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಸ್ವಾಸ್ಥ್ಯ ಸಮಾಜ ನಿರ್ಮಾಣದ ದೃಷ್ಟಿಯಿಂದ ಮಾದಕ ವಸ್ತುಗಳಿಂದ ಪ್ರತಿಯೊಬ್ಬರು ದೂರವಿರಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಡಿಸಿಸಿ ಬ್ಯಾಂಕ್ ಆವರಣದಲ್ಲಿ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾದಕ ವಸ್ತುಗಳ ಹಾವಳಿಯಿಂದಾಗಿ ಇಂದು ಸಾಕಷ್ಟು ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ವ್ಯಕ್ತಿ ವ್ಯಕ್ತಿಗಳ ನಡುವೆ ಘರ್ಷಣೆ, ವ್ಯಕ್ತಿತ್ವದ ಮೇಲೆ ಹಲ್ಲೆ,  ದೌರ್ಜನ್ಯ ಮತ್ತಿತರ ಸಮಾಜಬಾಹಿರ ದುಷ್ಕೃತ್ಯ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಮಾದಕ ವಸ್ತುಗಳ ಬಳಕೆಗೆ ಪ್ರಮುಖ ಕಾರಣ ಎಂದು ವಿಷಾದ ವ್ಯಕ್ತಪಡಿಸಿದರು‌.

ಮಾದಕ ವಸ್ತು ಸೇವನೆಯಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೂ ಬಲಿಯಾಗಬೇಕಾಗುತ್ತದೆ. ಯುವಜನತೆ ಮಾದಕ ವಸ್ತುಗಳಿಂದ ದೂರವಿರಬೇಕು. ಯಾವುದೇ ಕಾರಣಕ್ಕೂ ದುಷ್ಚಟಗಳಿಗೆ ಬಲಿಯಾಗಬಾರದು ಎಂದು ಕರೆನೀಡಿದರು.

ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾದಕ ವಸ್ತು ವಿರೋಧಿ ಅಭಿಯಾನ ಹಮ್ಮಿಕೊಂಡಿರುವುದು ಮಾದರಿ ಕಾರ್ಯ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಎಸ್. ಯಡಗೆರೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಾದಕ ವಸ್ತುಗಳ ಬಳಕೆ ಹೆಚ್ಚಾಗಿದ್ದು, ಯುವಜನತೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಶಿವಮೊಗ್ಗ ಕೂಡ ಅತ್ಯಂತ ಕೆಟ್ಟ ಹೆಜ್ಜೆಯಲ್ಲಿ ಸಾಗುತ್ತಿದೆ. ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಒಂದು ಅಭಿಯಾನ ಹಮ್ಮಿಕೊಳ್ಳಲಾಗಿದೆ. ವರ್ಷಪೂರ್ತಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾದಕ ವಸ್ತು ವಿರೋಧಿ ಅಭಿಯಾನಕ್ಕೆ ಸಹಿ ಸಂಗ್ರಹಣೆ ಮಾಡಲಾಯಿತು. ಉಪಸ್ಥಿತರಿದ್ದ ಹಲವರು ಸಹಿ ಮಾಡುವುದರ ಮೂಲಕ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.

ರಂಗಕರ್ಮಿ ಹಾಗೂ ಹೋರಾಟಗಾರ ಚರಕ ಪ್ರಸನ್ನ, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಾಳ್ಳಿ, ಸರ್ಜಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಧನಂಜಯ ಸರ್ಜಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಸಂಘದ ಗೌರವಾಧ್ಯಕ್ಷ ಎಸ್. ಚಂದ್ರಕಾಂತ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಉಪಾಧ್ಯಕ್ಷ ಕೆ. ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಗೋ.ವಾ. ಮೋಹನಕೃಷ್ಣ, ಖಜಾಂಚಿ ಶಿವಮೊಗ್ಗ ನಂದನ್, ರಾಮಚಂದ್ರ ಗುಣಾರಿ, ಆರಗ ರವಿ, ಸೂರ್ಯನಾರಾಯಣ್, ಶಿವಮೊಗ್ಗ ನಾಗರಾಜ್, ನಾಗರಾಜ್, ಕಿರಣ್ ಕಂಕಾರಿ, ಲಿಯಾಕತ್, ಭರತೇಶ್, ಸ್ಪಂದನ ಚಂದ್ರು, ಗಣೇಶ್, ಅಬ್ದುಲ್ ರಜಾಕ್, ಶಿ.ಜು. ಪಾಶಾ, ದತ್ತಾತ್ರೇಯ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.