ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ: ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ. ಅವರು ಈ ಕೂಡಲೇ ಪೀಠ ತ್ಯಾಗ ಮಾಡಬೇಕು. ಅವರನ್ನು ಪೊಲೀಸರು ತಕ್ಷಣವೇ ಬಂಧಿಸಬೇಕು. ಸಾಮಾಜಿಕ ಸಂಘ, ಸಂಸ್ಥೆಗಳನ್ನೊಳಗೊಂಡ ಎಸ್ಐಟಿ ವಿಶೇಷ ತನಿಖಾ ದಳ ರಚಿಸಬೇಕು ಎಂದು ಆಗ್ರಹಿಸಿದರು.
ಮಕ್ಕಳ ಮೇಲೆ ಅತ್ಯಾಚಾರದಂತಹ ಪ್ರಕರಣ ಹೇಯಕೃತ್ಯವಾಗಿದೆ. ಇಂತಹ ಸ್ವಾಮೀಜಿಗಳು ಯಾವುದೇ ಕಾರಣಕ್ಕೂ ಹೊರಗಡೆ ಇರಬಾರದು. ಅವರು ಜೈಲಿನಲ್ಲಿರಬೇಕು. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಬೇಕು. ಅವರ ಬಂಧನವಾಗದಿರುವುದನ್ನು ನೋಡಿದರೆ ಇದರಲ್ಲಿ ರಾಜಕೀಯ ಪ್ರಭಾವ ಇದೆ ಎಂದು ಗೊತ್ತಾಗುತ್ತದೆ ಎಂದು ದೂರಿದರು.
ಸ್ವಾಮೀಜಿಯ ಸುತ್ತ ಹಲವು ವಿವಾದಗಳು ಇವೆ. ಆಕಸ್ಮಾತ್ ವಿರೋಧಿಗಳು ಷಡ್ಯಂತ್ರ ಮಾಡಿದ್ದರೆ, ಅದನ್ನು ಬೇಕಾದರೂ ಪ್ರತ್ಯೇಕವಾಗಿ ಪರಿಗಣಿಸಿ ವಿಚಾರಣೆ ಮಾಡಲಿ. ಆದರೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಅನ್ಯಾಯವಾಗಬಾರದು. ಆದ್ದರಿಂದ ಕೂಡಲೇ ತನಿಖೆ ನಡೆಸಿ ಸ್ವಾಮೀಜಿ ಬಂಧಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿಎಸ್ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹಾಲೇಶಪ್ಪ, ಸಂಚಾಲಕ ಶಿವಕುಮಾರ್ ಆಸ್ತಿ ಎಂ.ಆರ್., ಮಂಜುನಾಥ್, ಗೋವಿಂದ್, ಶೇಷಪ್ಪ, ಪುಟ್ಟರಾಜ್ ಮೊದಲಾದವರಿದ್ದರು.

Leave a Comment