ಮಲೆನಾಡಿನಲ್ಲಿ ಅರಣ್ಯ ಉಳಿಯಲು ಸ್ಥಳೀಯ ಜನರು ನೀಡಿದ ಕೊಡುಗೆಯನ್ನು ಮರೆತು ಅರಣ್ಯ ಇಲಾಖೆ ದೌರ್ಜನ್ಯ ನಡೆಸಬಾರದು ; ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ಸಾಗರ : ಮನುಷ್ಯ ಮತ್ತು ಅರಣ್ಯ ಒಟ್ಟೊಟ್ಟಿಗೆ ಇದ್ದಾಗ ಮಾತ್ರ ಎರಡೂ ಸಂಪನ್ಮೂಲಗಳು ಸದೃಢಗೊಳ್ಳಲು ಮತ್ತು ಉಳಿದು ಬೆಳೆಯಲು ಸಾಧ್ಯ. ಈ ಸತ್ಯವನ್ನು ಅರಣ್ಯ ಇಲಾಖೆ ಅರಿತುಕೊಳ್ಳಬೇಕು. ಮಲೆನಾಡಿನಲ್ಲಿ ಅರಣ್ಯ ಉಳಿಯಲು ಸ್ಥಳೀಯ ಜನರು ನೀಡಿದ ಕೊಡುಗೆಯನ್ನು ಮರೆತು ಅರಣ್ಯ ಇಲಾಖೆ ದೌರ್ಜನ್ಯ ನಡೆಸಬಾರದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. 
ತಾಲ್ಲೂಕಿನ ಬಿಳಿಗಾರಿನಲ್ಲಿ ಜನಪರ ಹೋರಾಟ ವೇದಿಕೆ ಆಶ್ರಯದಲ್ಲಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಶುಕ್ರವಾರ ಉರುಳುಗಲ್ಲು ಗ್ರಾಮದ ಅಮಾಯಕರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಬಿಳಿಗಾರಿನಿಂದ ಕಾರ್ಗಲ್‍ವರೆಗಿನ 22 ಕಿ.ಮೀ. ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡುತ್ತಾ, ಅಮಾಯಕ ಗ್ರಾಮಸ್ಥರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಮಲೆನಾಡು ಭಾಗದ ಜನರನ್ನು ಗೇಣಿಮುಕ್ತವಾಗಿಸಿದ್ದ ಉಳುವವನೇ ಹೊಲದೊಡೆಯ ಕಾಯ್ದೆ ಜಾರಿಗೆ ಬರಬೇಕಾದರೆ ಸಾಕಷ್ಟು ಹೋರಾಟಗಳು ನಡೆಯಿತು. ನಾನು ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇನೆ. 1972ರಲ್ಲಿ ವಿಧಾನಸಭೆಗೆ ಆಯ್ಕೆಯಾದಾಗ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಮಲೆನಾಡಿನ ಗೇಣಿ ರೈತರ ಸ್ಥಿತಿಗತಿಯನ್ನು ಯಥಾವತ್ತಾಗಿ ತಿಳಿಸಿದ್ದರಿಂದ ಗೇಣಿ ರೈತರ ಸಮಸ್ಯೆ ಬಗೆಹರಿಸಲು ಸಮಿತಿ ಮಾಡಿ, ನನ್ನನ್ನು ಸದಸ್ಯನಾಗಿ ನೇಮಕ ಮಾಡಿದ್ದರು. ಅಂದಿನ ಹೋರಾಟದ ಫಲವಾಗಿ ಭೂಸುಧಾರಾಣಾ ಕಾಯ್ದೆ ಜಾರಿಯಾಗಿ ಗೇಣಿದಾರರ ಬದುಕು ಹಸನಾಗಿದೆ. ಇಂತಹ ಹೋರಾಟಗಳು ನಿರಂತರವಾಗಿ ನಡೆದಾಗ ಮಾತ್ರ ನ್ಯಾಯ ದೊರಕಿಸಿಕೊಳ್ಳಲು ಸಾಧ್ಯವಿದೆ. ನಾವು ಆಯ್ಕೆ ಮಾಡಿ ಕಳಿಸುವ ಸಂಸದರು, ಶಾಸಕರು ಶಾಸನ ಸಭೆಯಲ್ಲಿ ನಮ್ಮ ಪರವಾಗಿ ಮಾತನಾಡದೆ ಇರುವುದೇ ಅನೇಕ ಸಮಸ್ಯೆಗಳು ಸಮಸ್ಯೆಯಾಗಿಯೆ ಉಳಿಯಲು ಕಾರಣವಾಗಿದೆ ಎಂದು ಹೇಳಿದರು. 
ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿ, ಮಲೆನಾಡು ಭಾಗದ ರೈತರು ಗೇಣಿ ಹೋರಾಟದಿಂದ ಒಂದಷ್ಟು ಭೂಮಿ ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಬೇರೆಬೇರೆ ಕಾನೂನುಗಳನ್ನು ಜಾರಿಗೆ ತಂದು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ. ಇರುವ ಭೂಮಿಯನ್ನು ಕಸಿದುಕೊಂಡು ಮತ್ತೆ ನಿರಾಶ್ರಿತರನ್ನಾಗಿ ಮಾಡುವ  ಅರಣ್ಯ ಇಲಾಖೆ ಕಾರ್ಯವೈಖರಿ ಖಂಡನಾರ್ಹವಾದದ್ದು. ಹೋರಾಟದ ಮೂಲಕ ಮಾತ್ರ ಇಂತಹ ದಬ್ಬಾಳಿಕೆ ಕೊನೆಗಾಣಿಸಲು ಸಾಧ್ಯ ಎಂದು ಹೇಳಿದರು. 
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ್, ಪ್ರಮುಖರಾದ ಶಿವಾನಂದ ಕುಗ್ವೆ, ಎನ್.ಡಿ.ವಸಂತ ಕುಮಾರ್, ದಿನೇಶ್ ಶಿರವಾಳ, ತೀ.ನ.ಶ್ರೀನಿವಾಸ್, ತ್ಯಾಗಮೂರ್ತಿ, ಅಶೋಕ ಬರದವಳ್ಳಿ, ಪ್ರಭಾವತಿ ಚಂದ್ರಕಾಂತ್, ಸವಿತಾ ದೇವರಾಜ್ ಇನ್ನಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.