ಎಸಿಬಿ ರಚನೆ ರದ್ದು, ಲೋಕಾಯುಕ್ತಕ್ಕೆ ಬಲ ನೀಡಿದ ಹೈಕೋರ್ಟ್
ಬೆಂಗಳೂರು,ಆಗಸ್ಟ್ 11: 2016 ರಲ್ಲಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳ ರಚನೆ (ಎಸಿಬಿ) ರದ್ದು ಮಾಡಲಾಗಿದೆ.
ಲೋಕಾಯುಕ್ತ ಬಲವರ್ಧನೆಗೆ ಕ್ರಮಕೈಗೊಳ್ಳಲು ಆದೇಶ ಹೊರಡಿಸಲಾಗಿದ್ದು, ಎಸಿಬಿಯ ಎಲ್ಲ ಕೇಸ್ ಲೋಕಾಯುಕ್ತಕ್ಕೆ ನೀಡಲು ನ್ಯಾ. ಬಿ. ವೀರಪ್ಪ ನೇತೃತ್ವದಲ್ಲಿ ವಿಭಾಗೀಯ ಪೀಠವು ಮಹತ್ವದ ಆದೇಶ ಹೊರಡಿಸಿದೆ.
ಭ್ರಷ್ಟಾಚಾರ ನಿಗ್ರಹ ದಳವನ್ನು 2016ರ ಮಾರ್ಚ್ 14ರಂದು ರಚನೆ ಮಾಡಲಾಗಿತ್ತು. ಈ ಪಡೆಯು ನೇರವಾಗಿ ಆಡಳಿತಾತ್ಮಕ ನಿಯಂತ್ರಣದಲ್ಲಿದ್ದು, ಎಡಿಜಿಪಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿಯವರು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶಕರಾಗಿರುತ್ತಾರೆ. ಎಡಿಜಿಪಿರವರಿಗೆ ಆಡಳಿತಾತ್ಮಕ ಹಾಗೂ ಇತರ ವಿಷಯಗಳಲ್ಲಿ ಸಹಕರಿಸಲು ಐಜಿಪಿ ಹುದ್ದೆಯ ಅಧಿಕಾರಿ ಇರುತ್ತಾರೆ.
ಭ್ರಷ್ಟಾಚಾರ ನಿಗ್ರಹ ದಳವು ಕರ್ನಾಟಕ ಸರ್ಕಾರದ ವಿಶೇಷ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗುಪ್ತ ಮಾಹಿತಿ ಸಂಗ್ರಹಿಸುವುದು, ಇತರ ಇಲಾಖೆಗಳ ವಿಜಿಲೆನ್ಸ್ ಅಧಿಕಾರಗಳೊಂದಿಗೆ ಸಮನ್ವಯತೆ ಸಾಧಿಸಿ ಸರ್ಕಾರಿ ಅಧಿಕಾರಿಗಳು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳ ಬಗ್ಗೆ ತನಿಖೆಯನ್ನು ಕೈಗೊಂಡು ಅಭಿಯೋಜನೆಗೆ ಒಳಪಡಿಸುವುದು ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ಇದರ ಪ್ರಮುಖ ಕರ್ತವ್ಯಗಳಾಗಿವೆ.
ಎಸಿಬಿಯು ಭ್ರಷ್ಟಾಚಾರ ನಿಗ್ರಹ ಅಧಿನಿಯಮ 1988ರ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಸಾರ್ವಜನಿಕರು, ಸರ್ಕಾರ ಹಾಗೂ ಲೋಕಾಯುಕ್ತ ಸಂಸ್ಥೆಗಳಿಂದ ಸಾರ್ವಜನಿಕ ಸೇವಕರ ವಿರುದ್ಧ ಬಂದ ದೂರು ಅರ್ಜಿಗಳ/ನಿಖರ ಮಾಹಿತಿ ಬಗ್ಗೆ ವಿಚಾರಣೆಯನ್ನೂ ಸಹ ನಿಗ್ರಹ ದಳವು ಮಾಡುತ್ತದೆ.
ಕೇಂದ್ರ ಸ್ಥಾನದಲ್ಲಿ ಇಬ್ಬರು ಎಸ್‌ಪಿ ದರ್ಜೆಯ ಅಧಿಕಾರಿಗಳಿದ್ದು 1. ಎಸ್ಪಿ (ಕೇಂದ್ರ ಸ್ಥಾನ) ಹಾಗೂ 2. ಎಸ್ಪಿ (ಆಡಳಿತ) ಎಂಬ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯದಲ್ಲಿ 7 ವಲಯಗಳಾಗಿ ವಿಭಾಗಿಸಲಾಗಿತ್ತು. ಅವುಗಳೆಂದರೆ, 1. ಕೇಂದ್ರ ವಲಯ, 2. ದಕ್ಷಿಣ ವಲಯ, 3. ಪೂರ್ವ ವಲಯ, 4. ಪಶ್ಚಿಮ ವಲಯ, 5. ಉತ್ತರ ವಲಯ, 6. ಈಶಾನ್ಯ ವಲಯ, 7. ಬಳ್ಳಾರಿ ವಲಯಗಳು ಇದ್ದವು.
Leave a Comment