ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಮತ್ತು ವಿಶ್ವ ಸ್ತನ್ಯಪಾನ ವಾರಾಚರಣೆ*ಹೆರಿಗೆಯಾದ ಅರ್ಧ ಗಂಟೆಯೊಳಗೆ ಮಗುವಿಗೆ ಎದೆ ಹಾಲುಣಿಸಬೇಕು*

ಶಿವಮೊಗ್ಗ ಆಗಸ್ಟ್ 01:
       ಹೆರಿಗೆಯಾದ ಅರ್ಧ ಗಂಟೆಯೊಳಗೆ ಮಗುವಿಗೆ ಎದೆ ಹಾಲು ಕುಡಿಸಬೇಕು. ಇದರಿಂದ ಮಗುವಿಗೆ ಉತ್ತಮ ಪೋಷಕಾಂಶ ಲಭಿಸಿ ಅನೇಕ ಸೋಂಕುಗಳಿಂದ ಮಗು ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟಿಲ್ ತಿಳಿಸಿದರು.
     ಮಿಳಘಟ್ಟ ಪ್ರೌಢಶಾಲೆಯಲ್ಲಿ ಇಂದು ಆಯೋಜಿಸಲಾಗಿದ್ದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಮತ್ತು ವಿಶ್ವ ಸ್ತನ್ಯಪಾನ ವಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. 
   ಸಿಜೇರಿಯನ್ ಅಥವಾ ಸಹಜ ಹೆರಿಗೆಹಾದ ಅರ್ಧ ಗಂಟೆಯಲ್ಲೇ ಮಗುವಿಗೆ ತಾಯಿಯ ಮೊದಲ ಹಾಲು ಕುಡಿಸಬೇಕು. ಇದಕ್ಕೆ ಕೊಲೆಸ್ಟ್ರಮ್ ಎನ್ನಲಾಗುತ್ತದೆ. ಇದರಲ್ಲಿ ಮಗುವಿಗೆ ಅವಶ್ಯಕವಾದ ಪೋಷಕಾಂಶಗಳಿದ್ದು, ಈ ಹಾಲು ಕುಡಿಸುವುದರಿಂದ ಮಗು ನ್ಯುಮೋನಿಯಾ, ಶ್ವಾಸಕೋಶದ ತೊಂದರೆ, ವಾಂತಿ-ಭೇದಿ ಇತರೆ ಸೋಂಕುಗಳಿಂದ ರಕ್ಷಣೆ ಪಡೆಯುತ್ತದೆ.
      ತಾಯಿಯ ಹಾಲು ಸಂಪೂರ್ಣ ಉಚಿತ ಮತ್ತು ಆರೋಗ್ಯಕರವಾಗಿದ್ದು, ಹಾಲು ಕುಡಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಸುಧಾರಿಸುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ತಾಯಂದಿರು ಸರಿಯಾದ ಭಂಗಿಯಲ್ಲಿ ಮಗುವಿಗೆ ಹಾಲನ್ನು ಕುಡಿಸಬೇಕು. ಹಾಗೂ ಆರು ತಿಂಗಳವರೆಗೆ ಬೇರೆ ಪೂರಕ ಆಹಾರ ನೀಡದೆ ಸಂಪೂರ್ಣವಾಗಿ ತಾಯಿ ಹಾಲನ್ನೇ ನೀಡಬೇಕು ಎಂದು ಹೇಳಿದರು.
     ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಮಾತನಾಡಿ, ಅತಿಸಾರ ಭೇದಿಯನ್ನು ನಿಯಂತ್ರಿಸಲು ಓಆರ್‍ಎಸ್ ಮತ್ತ ಜಿಂಕ್ ಮಾತ್ರೆಯನ್ನು ಬಳಸಬೇಕು. ಒಂದು ಲೀಟರ್ ನೀರಿಗೆ ಒಂದು ಪೊಟ್ಟಣ ಓಆರ್‍ಎಸ್ ಪುಡಿ ಹಾಕಿ ಮಿಶ್ರಣ ತಯಾರಿಸಿಕೊಂಡು ಚಮಚದಲ್ಲಿ ಆಗಾಗ್ಗೆ ಮಗುವಿಗೆ ಕುಡಿಸುತ್ತಿರಬೇಕು. ಇದರಿಂದ ನಿರ್ಜಲೀಕರಣ ಆಗುವುದಿಲ್ಲ. ಜೊತೆಗೆ 14 ದಿನಗಳವರೆಗೆ ಜಿಂಕ್ ಮಾತ್ರೆಯನ್ನು ನೀಡಬೇಕೆಂದು ಸಲಹೆ ನೀಡಿದರು.
     ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಆ.01 ರಿಂದ 15 ರವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಆಚರಿಸಲಾಗುತ್ತಿದೆ.   ಜನಸಾಮಾನ್ಯರಲ್ಲಿ ಮುಖ್ಯವಾಗಿ ಪೋಷಕರು ಮತ್ತು ಮಕ್ಕಳಲ್ಲಿ ಪರಿಸರ ನೈರ್ಮಲ್ಯ, ಕೈತೊಳೆಯುವ ವಿಧಾನ, ವೈಯಕ್ತಿಕ ಶುಚಿತ್ವದ ಬಗ್ಗೆ ಹಾಗೂ ಅತಿಸಾರ ಬೇಧಿಗೆ ಒಳಗಾದ ಮಕ್ಕಳಿಗೆ ಆರೈಕೆ ಮತ್ತು ಚಿಕಿತ್ಸೆಯನ್ನು ನೀಡುವ ವಿಧಾನದ ಅರಿವು ಮೂಡಿಸಿ, 
0 ಯಿಂದ 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು ಈ ಪಾಕ್ಷಿಕ ಆಚರಣೆ ಮುಖ್ಯ ಉದ್ದೇಶವಾಗಿದೆ ಎಂದರು.
       ತಾಯಿ-ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸ್ತನ್ಯಪಾನ ಬಹಳ ಮುಖ್ಯವಾಗಿದ್ದು, ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಇಂದಿನಿಂದ ಒಂದು ವಾರ ಕಾಲ ವಿಶ್ವ ಸ್ತನ್ಯಪಾನ ವಾರಾಚರಣೆ ಮಾಡಲಾಗುತ್ತಿದೆ ಎಂದರು.
       ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ನಾಗ್ಲೀಕರ್ ಕಾರ್ಯಕ್ರಮದಲ್ಲಿ ನೆರೆದೆದ್ದ ತಾಯಂದಿರಿಗೆ ಕುಟುಂಬ ಕಲ್ಯಾಣ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.  
    ಕಾರ್ಯಕ್ರಮದಲ್ಲಿ ತಾಯಂದಿರಿಗೆ ಓಆರ್‍ಎಸ್ ಪೊಟ್ಟಣ ಮತ್ತು ಜಿಂಕ್ ಮಾತ್ರೆಗಳನ್ನು ವಿತರಿಸಾಯಿತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಮಿಳಘಟ್ಟ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಉಮಾಶಂಕರ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
(ಫೋಟೊ ಇದೆ)
===

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.