ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್‌ ನಿಲುಗಡೆ ಹಾಗೂ ಬಸ್ಸಿನಲ್ಲಿ ಆಗುತ್ತಿರುವ ಅಡಚಣೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಮನವಿ

ಶಿವಮೊಗ್ಗ  : ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್‌ ನಿಲುಗಡೆ ಹಾಗೂ ಬಸ್ಸಿನಲ್ಲಿ ಆಗುತ್ತಿರುವ ಅಡಚಣೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಯುವ ಘಟಕದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು

ತುಪ್ಪೂರು, ಶನಿವಾಸ, ಜಟ್ಟಿಸರ, ಗಡ್ಡೆಮನೆ, ಹೊರಬೈಲು, ಕೋಡನಾಳ, ಬ್ಯಾಡನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿ ದಿನ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಶಿವಮೊಗ್ಗ ನಗರಕ್ಕೆ ತೆರಳುತ್ತಿದ್ದು, ಬಸ್ ನಿಲುಗಡೆ ವ್ಯವಸ್ಥೆ ಈ ಮೇಲಿನ ಗ್ರಾಮಗಳಿಗೆ ಇರುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರಿಕರು ಪರದಾಡುವಂತಾಗಿದೆ ಎಂದು ದೂರಿದರು.

ಪಕ್ಕದೂರಿನ ಬಸ್‌ ನಿಲುಗಡೆ ಚೋರಡಿ ಗ್ರಾಮಕ್ಕೆ ಪಾಸ್ ಇದ್ದರು 20 ರೂ. ಕೊಟ್ಟು ಖಾಸಗಿ ಬಸ್ ಗೆ ಹೋಗಬೇಕಾದ ಅನಿವಾರ್ಯತೆ ಇದೆ. ಹೆಣ್ಣುಮಕ್ಕಳು ಬೆಳಿಗ್ಗೆ ಮತ್ತು ಸಂಜೆಯ ವೇಳೆ ಕಾಲ್ನಡಿಗೆಯಲ್ಲಿ ನಡೆದು ಬರಬೇಕು. ಸಂಜೆಯ ವೇಳೆ ಹೆಣ್ಣುಮಕ್ಕಳಿಗೆ ತೊಂದರೆ ಆಗುತ್ತಿದೆ. ಈ ಹಿಂದೆ ನಾವು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಸಹ ಅಧಿಕಾರಿಗಳು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ತೋರಿಸದೆ ಯಥಾಪ್ರಕಾರ ಈ ವಿಷಯವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಕೆಲವು ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕರು ಬಸ್ ಪಾಸ್ ಇದ್ದ ವಿದ್ಯಾರ್ಥಿಗಳನ್ನು ಬಸ್ ಹೊರಡುವ ಕೊನೆಯ ಕ್ಷಣಗಳವರೆಗೆ ಬಸ್ಸಿನೊಳಗೆ ಹತ್ತುವುದಕ್ಕೆ ಅನುಮತಿಸದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ವಿದ್ಯಾರ್ಥಿಗಳ ಮನಸ್ಸಿಗೆ ನೋವುಂಟು ಮಾಡುತ್ತಿದ್ದಾರೆ. ಸರ್ಕಾರಿ ಸೇವೆಗಳನ್ನು ಬಳಸಲೇಬಾರದೆಂಬ ಮನಸ್ಥಿತಿಗೆ ತಲುಪುವ ರೀತಿ ಇಲ್ಲದೇ ಇರುವ ನಿಯಮಗಳನ್ನು ಹೇರಿ ವಿದ್ಯಾರ್ಥಿಗಳಿಗೆ ಅಡಚಣೆ  ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.

ಕೆಎಸ್ಆರ್ಟಿಸಿ ಬಸ್ ನಿಲ್ದಾಣದೊಳಗಿನ ಸಾರ್ವಜನಿಕ ಶೌಚಾಲಯಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದು, ಅದನ್ನು ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಗೂಂಡಾಗಿರಿಯನ್ನು ಮಾಡುತ್ತಿದ್ದಾರೆ. ಬಗ್ಗೆ ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಪೊಲೀಸ್‌ ಠಾಣೆಗಳಲ್ಲಿ ದೂರು ನೀಡಿದ್ದರೂ ಸಹ ಯಾವುದೇ ಕ್ರಮಗಳನ್ನು ತೆಗೆದುಕೋಳ್ಳಲಾಗಿಲ್ಲ ಹಾಗೂ ಅಲ್ಲಿಯ ಹೆಚ್ಚಿನ ಸುಲಿಗೆಯೂ ಸಹ ನಿಲ್ಲುತ್ತಿಲ್ಲ ಎಂದು ಆರೋಪಿಸಿದರು.

ಆದ್ದರಿಂದ ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಜಿಲ್ಲೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ  ಮಧು ಬಿ.ಆರ್. ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.