*ಅಸಾಂಪ್ರದಾಯಿಕ ಇಂಧನ ಬಳಕೆ ಹೆಚ್ಚಬೇಕು : ಗೃಹ ಸಚಿವ ಆರಗ ಜ್ಞಾನೇಂದ್ರ*

ಶಿವಮೊಗ್ಗ ಜುಲೈ 30 :
       ವಿದ್ಯುತ್ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡಿ, ಅಸಾಂಪ್ರದಾಯಿಕ ಇಂಧನದ ಬಳಕೆಯನ್ನು ಹೆಚ್ಚಿಸಬೇಕಿದೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೇಳಿದರು.
    ಜಿಲ್ಲಾಡಳಿತ, ಇಂಧನ ಇಲಾಖೆ ಹಾಗೂ ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಶಿವಮೊಗ್ಗ ವೃತ್ತ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಉಜ್ವಲ ಭಾರತ, ಉಜ್ವಲ ಭವಿಷ್ಯ ಘೋಷಣೆಯಡಿ ವಿದ್ಯುತ್ @ 2047 ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 
     ವಿದ್ಯುತ್ ನಮ್ಮ ಬಾಳಿನಲ್ಲಿ ಬದಲಾವಣೆ ತಂದಿದೆ. ವಿದ್ಯುತ್ ಒಂದು ದೊಡ್ಡ ಜಾಲ, ಗ್ರಾಹಕರಿಗೆ ಉತ್ತಮ ವಿದ್ಯುತ್ ಸೇವೆ ನೀಡಲು ಅಧಿಕಾರಿ/ಸಿಬ್ಬಂದಿಗಳು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ವಿಶೇಷವಾಗಿ ಲೈನ್‍ಮನ್‍ಗಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ.
     ಹಿಂದೆ ನಮ್ಮ ಊರಿಗೆ ಮೊದಲ ಬಾರಿಗೆ ವಿದ್ಯುತ್ ದೀಪ ಬಂದಾಗ ಎಣ್ಣೆ ಇಲ್ಲದ ದೀಪ ಹೇಗಿರುತ್ತದೆಂದು ಕುತೂಹಲದಿಂದ ನೋಡುತ್ತಿದ್ದೆವು. ಆ ನಂತರ ವಿದ್ಯುತ್ ಜಾಲ ದೊಡ್ಡದಾಗಿ ಬೆಳೆದು ಈಗ ಶೇ.100 ವಿದ್ಯುದೀಕರಣಕ್ಕೆ ಬಂದು ತಲುಪಿರುವುದು ಒಳ್ಳೆಯ ಬೆಳವಣಿಗೆ. 
    ಅಸಾಂಪ್ರದಾಯಿಕ ಇಂಧನವನ್ನು ನಾವು ಹೆಚ್ಚಿಸಬೇಕಿದೆ. ಈಗಾಗಲೇ ವಿದ್ಯುತ್ ಚಾಲಿನ ವಾಹನಗಳು ಬಂದಿವೆ. ಇನ್ನು 10 ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್‍ನಿಂದ ಓಡುವ ವಾಹನಗಳು ಕಡಿಮೆ ಆಗಲಿವೆ. ರೈಲ್ವೆಯಲ್ಲಿ ಸಹ ವಿದ್ಯುತ್ ಬಳಕೆ ಹೊಸ ಬದಲಾವಣೆ ತಂದಿದೆ. ದೇಶದ ಆರ್ಥಿಕ ಪ್ರಗತಿಗೆ ಸಹ ಇದು ಕೊಡುಗೆ ನೀಡುತ್ತಿದ್ದು, ದೇಶದ ಭವಿಷ್ಯ ಉಜ್ವಲವಾಗಿ ನಿರ್ಮಾಣ ಮಾಡುವಲ್ಲಿ ಪೂರ್ಣ ಪ್ರಮಾಣದ ಕೆಲಸವನ್ನು ಸರ್ಕಾರ ಮಾಡುತ್ತಿರುವುದು ಅಭಿನಂದನೀಯ ಎಂದರು.
       ಕಾರ್ಯಕ್ರಮದ ಉದ್ಘಾಟಿಸಿದ ರೇಷ್ಮೆ, ಯುವ ಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಮಾತನಾಡಿ, ಅಭಿವೃದ್ದಿ ಪಥದಲ್ಲಿ ಶಿವಮೊಗ್ಗ ನಂ.1 ಸ್ಥಾನದಲ್ಲಿದೆ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ನೂರು ವರ್ಷ ತುಂಬುವ 2047 ರ ಹೊತ್ತಿಗೆ ಇಡೀ ದೇಶಕ್ಕೆ ಶಕ್ತಿ ತುಂಬುವ ಕೆಲಸ ಆಗಲಿದೆ. ಪ್ರಧಾನಿಯವರ ನೇತೃತ್ವದಲ್ಲಿ ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಅತ್ಯುತ್ತಮ ಸಾಧನೆ ಆಗಿದೆ. ಹಳ್ಳಿ-ಹಳ್ಳಿ, ಗುಡ್ಡಗಾಡು ಪ್ರದೇಶಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಅವರ ಕನಸು ಸಾಕಾರಗೊಂಡಿದೆ. ಮುಂದೆ ನಮ್ಮ ದೇಶ ಇಡೀ ವಿಶ್ವದಲ್ಲಿ 1ನೇ ಸ್ಥಾನಕ್ಕೆ ಬರಲಿದ್ದು, ಆ ನಿಟ್ಟಿನಲ್ಲಿ ಸಾಧನೆ ಪ್ರಗತಿಯಲ್ಲಿದೆ ಎಂದರು.
     ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಸರ್ವಾಂಗೀಣ ಅಭಿವೃದ್ದಿಗೆ ಅನೇಕ ಉತ್ತಮ ಯೋಜನೆಗಳನ್ನು ನೀಡಿದೆ. 2047 ರ ಹೊತ್ತಿಗೆ ಆಮದು ಮಾಡಿಕೊಳ್ಳುವುದು ನಿಂತು, ರಫ್ತು ಮಾಡುವ ಸಂಕಲ್ಪ ನಮ್ಮದಾಗಬೇಕು ಎಂದ ಅವರು ನವೀಕರಿಸಬಹುದಾದ ಇಂಧನದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
       ಅಧ್ಯಕ್ಷತೆ ವಹಿಸಿದ್ದ ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ವಿದ್ಯುತ್ ಕ್ಷೇತ್ರದಲ್ಲಿ ಹೊಸ ಮನ್ವಂತರ ಸೃಷ್ಟಿಸುವ ಪ್ರಯತ್ನಗಳು ಆಗುತ್ತಿವೆ. ಶೇ.100 ಗ್ರಾಮೀಣ ವಿದ್ಯುದೀಕರಣ ಸಾಧಿಸಲಾಗಿದೆ. 18,500 ಗ್ರಾಮಗಳು, 2.86 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ರೈತರ ಪಂಪ್‍ಸೆಟ್‍ಗಳಿಗೆ ರಾಜ್ಯ ಮತ್ತು ಕೇಂದ್ರದ ತಲಾ ಶೇ.30 ಸಬ್ಸಿಡಿ ತಲುಪಿದೆ. 2015 ರಲ್ಲಿ ಪ್ಯಾರಿಸ್‍ನಲ್ಲಿ ನಡೆದ ಸಭೆಯಲ್ಲಿ 2030 ರ ಹೊತ್ತಿಗೆ ಶೇ.40 ನವೀಕರಿಸಬಹುದಾದ ಇಂಧನಕ್ಕೆ ಒತ್ತು ನೀಡಬೇಕೆಂಬ ಘೋಷಣೆಯಾಗಿದ್ದು, ರಾಜ್ಯದ ಇಂಧನ ಇಲಾಖೆ ಮುಂಗಡವಾಗಿಯೇ ಈ ಗುರಿ ತಲುಪಿರುವುದು ಅಭಿನಂದನೀಯ. 
      2.68 ಲಕ್ಷ ಸಕ್ರ್ಯುಟ್ ಕಿ.ಮೀ ಹೆಚ್.ಡಿ ಲೈನ್ ಸ್ಥಾವರ, 6,500 ಸಕ್ರ್ಯುಟ್ ಕಿ.ಮೀ ಎಲ್‍ಟಿ ಲೈನ್ ಸ್ಥಾವರ ಸ್ಥಾಪನೆ ಆಗಿದೆ. ರಾಜ್ಯದಲ್ಲಿ 25 ಲಕ್ಷ ರೈತರ ಪಂಪ್‍ಸೆಟ್ ಇದ್ದು ರೂ.11 ಸಾವಿರ ಕೋಟಿ ಮೌಲ್ಯದ ವಿದ್ಯುತ್‍ನ್ನು ಉಚಿತವಾಗಿ ನೀಡಿದ್ದು, ಇನ್ನೂ ಅನೇಕ ಜನಪರ ಯೋಜನೆಗಳ ಮೂಲಕ ಇಂಧನ ಇಲಾಖೆ ಗೌರವ ತರುವ ಕೆಲಸ ಮಾಡುತ್ತಾ ಉತ್ತಮ ಕೊಡುಗೆಯನ್ನು ರಾಜ್ಯಕ್ಕೆ ನೀಡಿದೆ. ವಿದ್ಯುತ್ ಕಳ್ಳತನ, ಸೋರಿಕೆಯನ್ನು ಸಹ ಕಡಿಮೆ ಮಾಡುವ ಪ್ರಯತ್ನ ಇನ್ನೂ ಆಗಬೇಕು ಎಂದು ಹೇಳಿದರು.
    ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ವೀರೇಂದ್ರ.ಹೆಚ್.ಆರ್ ಸ್ವಾಗತಿಸಿದರು. ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿ. ನ ಉಪ ಮಹಾಪ್ರಬಂಧಕ ಮಂಗೇಶ್.ಎಸ್.ಬನ್ಸೊಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಮಾಲತೇಶ್, ರಾಜೇಶ್ ಕಾಮತ್, ಮೆಸ್ಕಾಂ ನಿರ್ದೇಶಕರಾದ ದಿನೇಶ್, ಗಿರಿರಾಜ್, ಶಿವರುದ್ರಪ್ಪ, ಹಾಗೂ ವಸಂತಕುಮಾರ್, ಮೋಹನ್, ರಮೇಶ್ ಹೆಗ್ಡೆ, ಮುಖ್ಯ ಇಂಜಿನಿಯರ್ ಬಸಪ್ಪ, ಇತರರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.