ಮಂಗಳೂರಲ್ಲಿ ಮತ್ತೊಬ್ಬ ಯುವಕನ ಭೀಕರ ಕೊಲೆ
ಮಂಗಳೂರು, ಜುಲೈ 28: ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಯುವಕನ ಭೀಕರ ಕೊಲೆ ನಡೆದಿದೆ. ಮಾರಕಾಸ್ತ್ರಗಳಿಂದ ಯುವಕನೊಬ್ಬನ ಮೇಲೆ ದಾಳಿ ನಡೆಸಿ ಕೊಲೆಗೈದಿರುವ ಘಟನೆ ಮಂಗಳೂರಿನ ಹೊರ ವಲಯದಲ್ಲಿ ಗುರುವಾರ ರಾತ್ರಿ ನಡೆದಿದೆ.
ಮಂಗಳೂರು ಹೊರವಲಯದ ಸುರತ್ಕಲ್ ಬಳಿ ಹ್ಯುಂಡಾಯ್ ಕಾರಿನಲ್ಲಿ ಬಂದಂತಹ ಅಪರಿಚಿತ ದುಷ್ಕರ್ಮಿಗಳ ತಂಡ ಫಾಜೀಲ್ ಎಂಬಾತನ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಮಂಕಿಕ್ಯಾಪ್ ಧರಿಸಿ ಬಂದಿದ್ಧ ನಾಲ್ವರು ದುಷ್ಕರ್ಮಿಗಳು ಸಾರ್ವಜನಿಕರ ಮುಂದೆಯೇ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಫಾಜಿಲ್‌ನನ್ನು ತಕ್ಷಣ ಸುರತ್ಕಲ್‌ನ ಎಜೆ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಫಾಜಿಲ್ ಕೊನೆಯಯಸಿರೆಳೆದಿದ್ದಾರೆ.
ಸ್ನೇಹಿತನ ಜತೆ ಮಾತನಾಡುತ್ತಿದ್ದ ವೇಳೆ ಫಾಜಿಲ್ ಮೇಲೆ ಹಲ್ಲೆ ಮುಸುಕುದಾರಿ ದುಷ್ಕರ್ಮಿಗಳ ತಂಡ ಹಲ್ಲೆ ಮಾಡಿದೆ. ಈ ದಾಳಿ ದೃಶ್ಯಗಳು ಅಕ್ಕಪಕ್ಕದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸುರತ್ಕಲ್ ಠಾಣೆಯ ಪೊಲೀಸರು ದಾವಿಸಿದ್ದು, ಸುರತ್ಕಲ್ ಪೇಟೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಮಂಗಳೂರು ಕಮಿಷನರ್ ಎನ್. ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಸುರತ್ಕಲ್‌ನಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಮಂಗಳೂರಿನ ಸುರತ್ಕಲ್‌ಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ರವಾನಿಸಲಾಗಿದೆ. ಸುರತ್ಕಲ್,ಮುಲ್ಕಿ, ಬಜ್ಪೆ ಹಾಗೂ ಪಣಂಬೂರ್ ಠಾಣ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಈಗಾಗಲೇ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ವಿರುದ್ಧ ಸ್ವತಃ ಕಾರ್ಯಕರ್ತರೆ ತಿರುಗಿ ಬಿದ್ದಿದ್ದಾರೆ. ಈ ನಡುವೆ ಕರಾವಳಿಯಲ್ಲಿ ಮತ್ತೋರ್ವ ಯುವಕನ ಕೊಲೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ.
Leave a Comment