ಸುಳ್ಯ ಬಿಜೆಪಿ ಮುಖಂಡನ ಹತ್ಯೆ, ಮೂರು ತಾಲೂಕು ಬಂದ್

 ಮಂಗಳೂರು, ಜುಲೈ 27: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯರೊಬ್ಬರ ಹತ್ಯೆ ಹಿನ್ನೆಲೆ ಬುಧವಾರ ಮೂರು ತಾಲೂಕುಗಳಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.

 


ಬಿಜೆಪಿ ಯುವ ಮುಖಂಡ 29 ವರ್ಷದ ಪ್ರವೀಣ್ ನೆಟ್ಟಾರು ಎಂಬ ಯುವಕನನ್ನು ನಗರದ ಬೆಳ್ಳಾರೆ ಪೇಟೆಯಲ್ಲಿ ಹತ್ಯೆ ಮಾಡಲಾಗಿದೆ. ಈ ಬರ್ಬರ ಹತ್ಯೆಯನ್ನು ಖಂಡಿಸಿ ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲಿ ಸ್ವಯಂಪ್ರೇರಿತ ಬಂದ್‌ಗೆ ವಿಎಚ್‌ಪಿ, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.

ಘಟನೆ ನಡೆದ ರಾತ್ರಿಯೇ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದರು. ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಕೇರಳ ನೋಂದಣಿ ಸಂಖ್ಯೆ ಹೊಂದಿದ್ದ ಬೈಕ್‌ನಲ್ಲಿ ಬಂದಂತಹ ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ಪ್ರವೀಣ್ ನೆಟ್ಟಾರು ಮೇಲೆ ಮನಸೋ ಇಚ್ಛೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿದ್ದರು. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

 ಪೆರುವಾಜೆ ಕ್ರಾಸ್‌ ಬಳಿ ಪ್ರವೀಣ್‌ ಅವರು ಕೋಳಿ ಅಂಗಡಿ ಹೊಂದಿದ್ದು, ರಾತ್ರಿ ಅಂಗಡಿ ಮುಚ್ಚುತ್ತಿರುವ ವೇಳೆ ಬೈಕ್‌ನಲ್ಲಿ ಬಂದಂತಹ ಮೂವರು ಮಾರಾಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಪ್ರವೀಣ್ ತಪ್ಪಿಸಿಕೊಳ್ಳಲು ಓಡಿದರಾದರೂ ಅಟ್ಟಾಡಿಸಿಕೊಂಡು ಹೋದ ದುಷ್ಕರ್ಮಿಗಳು ದಾಳಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.