ಸುಳ್ಳು ಹೇಳಿ ತಮ್ಮ ಪ್ರಭಾವ ಬೀರಿ, ಬೇಡ ಜಂಗಮರೆಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದದವರ ವಿರುದ್ದ ಕ್ರಮಕೈಗೊಳ್ಳಲಿ; ಎಂ.ಗುರುಮೂರ್ತಿ

ಶಿವಮೊಗ್ಗ,ಜು.25: ವೀರಶೈವ -ಲಿಂಗಾಯತ ಜಂಗಮ ಜಾತಿಯವರು  ಸುಳ್ಳು ಹೇಳಿ ತಮ್ಮ ಪ್ರಭಾವ ಬೀರಿ, ಬೇಡ ಜಂಗಮರೆಂದು  ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆ. ವೀರಶೈವ -ಲಿಂಗಾಯತ  ಜಂಗಮರಿಗೆ ಪ.ಜಾತಿ ಪ್ರಮಾಣ ಪತ್ರ ನೀಡಬಾರದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಒತ್ತಾಯಿಸಿದ್ದಾರೆ.
       
ಬಿಜೆಪಿ ಮುಖಂಡ, ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕರ ಮಕ್ಕಳು ಮತ್ತು ಸಹೋದರರು ತಮ್ಮ ಪ್ರಭಾವ ಬೀರಿ ಬೇಡ ಜಂಗಮ ಜಾತಿಗೆ ಸೇರಿದವರೆಂದು ಸುಳ್ಳು ಹೇಳಿ ಪರಿಶಿಷ್ಟ ಜಾತಿ ಪ್ರಮಾಣದ ಪತ್ರ ಪಡೆದಿರುತ್ತಾರೆ. ಇಂತಹವರ ಮೇಲೆ ಸೂಕ್ತವಾದ ಕಾನೂನುಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯಿತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದು ಎಙದರು

 ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ  ಪ್ರಕಾರ ಪರಿಶಿಷ್ಟ ಜಾತಿಗಳಲ್ಲಿ ಬೇಡ ಜಂಗಮ ಜಾತಿ ಕೂಡ ಒಂದಾಗಿದೆ. ಬೀಕ್ಷೆ ಬೇಡಿ ಜೀವನ ನಡೆಸುವ ಅಲೆಮಾರಿಗಳು ನಿಜವಾದ ಬೇಡ ಜಾತಿಗೆ ಸೇರಿದವರು.  ಆದರೆ ಇತ್ತೀಚೆಗೆ ಮುಂದುವರೆದ ವೀರಶೈವ ಲಿಂಗಾಯಿತ ಸಮಾಜದವರು ನಾವೇ ನಿಜವಾದ ಬೇಡ ಜಂಗಮರು ಎಂದು ಹೋರಾಟ ಕೈಗೊಂಡಿದ್ದಾರೆ ಎಂದು ತಿಳಿಸಿದರು.

 ಶಾಸ್ತ್ರೀಯ ಅಧ್ಯಯನ ಮತ್ತು ಜನಗಣತಿಯ ಪ್ರಕಾರ 1981  ರಲ್ಲಿ ಬೇಡ ಜಂಗಮರ ಜನಸಂಖ್ಯೆ ರಾಜ್ಯದಲ್ಲಿ 3,035 ರಷ್ಟಿತ್ತು. ಬೇಡ ಜಂಗಮರು ರಾಜ್ಯದ ಬೀದರ್ ಗುಲ್ಬರ್ಗ ರಾಯಚೂರು, ಬಳ್ಳಾರಿ ಗಡಿ ಭಾಗದಲ್ಲಿ ಮಾತ್ರ ವಾಸವಾಗಿದ್ದರು. 2001 ರ ಜನಗಣತಿ ಪ್ರಕಾರ 20,229 ಜನಸಂಖ್ಯೆ ಇತ್ತು. 2011 ರ ಜನಗಣತಿಯ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿತ್ತು . ಬೇಡ ಜಂಗಮರ ಆಚಾರ ವಿಚಾರಗಳು ಬೇರೆಯಾಗಿದ್ದು ವೀರಶೈವ ಜಂಗಮರ ಆಚಾರ ವಿಚಾರಗಳು ಕೂಡ ಬೇರೆಯಾಗಿವೆ ಎಂದು  ತಿಳಿಸಿದರು.

 ಆಂಧ್ರ ಮೂಲದಿಂದ ವಲಸೆ ಬಂದ ಬೇಡ ಜಂಗಮರ ಮಾತೃಭಾಷೆ ತೆಲುಗು. ವೀರಶೈವ ಅಥವಾ ಲಿಂಗಾಯಿತ ಜಂಗಮರು ಕರ್ನಾಟಕದ ಪ್ರಬಲ ಜಾತಿಯ ಉಪ ಪಂಗಡದವರಾಗಿದ್ದಾರೆ. ಇವರನ್ನು ಅಯ್ಯ, ಸ್ವಾಮಿ, ಐನೋರೆ ಎಂದು ಕರೆಯಲಾಗುತ್ತದೆ. ಇವರು ಸತ್ಯಹಾರಿಗಳಾಗಿದ್ದು ಹಿರೇಮಠ, ಸಾಲಿಮಠ, ಗದಗಿನ ಮಠ, ಚಿಕ್ಕಮಠ ಮುಂತಾದ ಅನ್ವರ್ಥನಾಮಗಳಿಂದ ಕರೆಯಲಾಗುತ್ತದೆ. ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಮುಂದುವರೆದ ರಾಜ್ಯದ ಪ್ರಬಲ ಸಮಾಜ ಇದಾಗಿದೆ ಎಂದು ತಿಳಿಸಿದರು.

 ಯಾವುದೇ ಕಾರಣಕ್ಕೂ ನಿಜವಾದ ಪರಿಶಿಷ್ಟ ಅರ್ಹ ಬೇಡ ಜಂಗಮರನ್ನು ಹೊರತುಪಡಿಸಿ ವೀರಶೈವ ಲಿಂಗಾಯಿತ ಜಂಗಮರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಕೊಡಬಾರದು. ಸರ್ಕಾರ ಅವರ ಹೋರಾಟಕ್ಕೆ ಮಣಿಯಬಾರದು. ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಮತ್ತು ಅವರಿಗೆ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಎ.ಡಿ. ಶಿವಪ್ಪ,  ವಾಲ್ಮೀಕಿ ಸಮಾಜದ ಅಧ್ಯಕ್ಷ ಆರ್. ಲಕ್ಷ್ಮಣ್, ನಾಗರಾಜ್, ಅಕ್ಕಿ ಬಸವರಾಜ್, ಮಾರವಳ್ಳಿ ಬಸವರಾಜ್, ರಮೇಶ್ ಚಿಕ್ಕಮರಡಿ ಮೊದಲಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.