ತ್ರೈಮಾಸಿಕ ಕೆಡಿಪಿ ಸಭೆಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ಸೂಕ್ತ ಪರಿಹಾರ: ಡಾ.ನಾರಾಯಣ ಗೌಡ
ಶಿವಮೊಗ್ಗ, ಅ.30: ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ಸೂಕ್ತ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ಅವರು ತಿಳಿಸಿದರು.
ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಅತಿವೃಷ್ಟಿಯಿಂದ ಸಂಭವಿಸಿದ ಎಲ್ಲಾ ಮಾನವ ಪ್ರಾಣ ಹಾನಿ ಹಾಗೂ ಜಾನುವಾರು ಪ್ರಾಣ ಹಾನಿಗೆ ಈಗಾಗಲೇ ಪರಿಹಾರ ಒದಗಿಸಲಾಗಿದೆ. ನೆರೆ ನೀರು ಮನೆಗೆ ನುಗ್ಗಿ ನಾಶನಷ್ಟ ಸಂಭವಿಸಿದ ಎಲ್ಲಾ ಪ್ರಕರಣಗಳಲ್ಲಿ 10ಸಾವಿರ ರೂ. ಪರಿಹಾರ ಒದಗಿಸಲಾಗಿದೆ. ಬೆಳೆ ಹಾನಿ ಹಾಗೂ ಮನೆ ಹಾನಿ ಪ್ರಕರಣಗಳಲ್ಲಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಕಳೆದ ಬಾರಿ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಬಂದಾಗ ರೈತರಿಗೆ ಪರಿಹಾರ ಒದಗಿಸಲಾಗಿದ್ದು, ಈ ಬಾರಿ ಸಹ ಅದೇ ರೀತಿ ಪರಿಹಾರ ಒದಗಿಸಲು ಪ್ರಸ್ತಾವನೆ ಸಲ್ಲಿಸಬೇಕು. ಜಿಲ್ಲೆಯಲ್ಲಿ ಫೈಬರ್ ದೋಟಿಗೆ ಹೆಚ್ಚಿನ ಬೇಡಿಕೆಯಿದ್ದು, ಸಬ್ಸಿಡಿಯನ್ನು ಆದ್ಯತೆ ಮೇರೆಗೆ ಒದಗಿಸಬೇಕು ಎಂದು ಹೇಳಿದರು.
ಅಧಿಕಾರಿಗಳ ವಿರುದ್ಧ ಕ್ರಮ: ಮರ ಕಡಿದ ರೈತನನ್ನು ಕ್ರಿಮಿನಲ್ ಎಂಬಂತೆ ವರ್ತಿಸಿ ಕೇಸು ದಾಖಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಿಸಿಎಫ್ ಅವರಿಗೆ ಸೂಚನೆ ನೀಡಲು ಸಚಿವ ಡಾ.ನಾರಾಯಣ ಗೌಡ ಅವರು ತಿಳಿಸಿದರು.
ಸಾಗರ ತಾಲೂಕಿನಲ್ಲಿ ರಸ್ತೆ ಮೇಲೆ ಬಿದ್ದಿದ್ದ ಮರವನ್ನು ಕಡಿದ ರೈತನನ್ನು ದೊಡ್ಡ ಅಪರಾಧಿ ಎಂಬಂತೆ ಸ್ಲೇಟ್ ಹಿಡಿಸಿ ಮೊಕದ್ದಮೆ ದಾಖಲಿಸಿರುವ ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹರತಾಳು ಹಾಲಪ್ಪ ಅವರ ಒತ್ತಾಯಕ್ಕೆ ಸಚಿವರು ಈ ಸೂಚನೆ ನೀಡಿದರು.
ರಸ್ತೆ ರಿಪೇರಿ ಕೈಗೊಳ್ಳಿ: ಶಿವಮೊಗ್ಗ-ಭದ್ರಾವತಿ ರಸ್ತೆ ಹಲವೆಡೆ ಮಳೆಯಿಂದಾಗಿ ಹಾನಿಗೀಡಾಗಿದ್ದು, ದುರಸ್ತಿ ಕಾರ್ಯ ಹಾಗೂ ರಸ್ತೆಯ ಇಕ್ಕೆಲೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ವತಿಯಿಂದ ಕೈಗೊಳ್ಳಬೇಕು. ತುಮಕೂರು-ಶಿವಮೊಗ್ಗ ಚತುಷ್ಪಥ ರಸ್ತೆ ಕಾಮಗಾರಿ ತ್ವರಿತಗೊಳಿಸಲು ಇರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಬೇಕು. ಶಿವಮೊಗ್ಗ-ಭದ್ರಾವತಿ ರಸ್ತೆಯಲ್ಲಿರುವ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸುವಂತೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ದೂರುಗಳು ಬಂದಿದ್ದು, ನಿರ್ಮಿಸಲಾಗಿರುವ ರಸ್ತೆಗಳ ನಿರ್ವಹಣೆಯನ್ನು ಸರಿಯಾಗಿ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಯೋಜನೆಯಡಿ ನಿರ್ಮಿಸಲಾಗಿರುವ ರಸ್ತೆಗಳ ಗುಣಮಟ್ಟವನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಸಚಿವ ಆರಗ ಜ್ಞಾನೇಂದ್ರ ಅವರು ಸೂಚನೆ ನೀಡಿದರು. ಜಿಲ್ಲೆಯ ಎಲ್ಲಾ 262 ಗ್ರಾಮ ಪಂಚಾಯತ್‍ಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕಕ್ಕೆ ಅನುದಾನ ಮಂಜೂರು ಮಾಡಲಾಗಿದ್ದು, 127ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ 179 ಘಟಕಗಳನ್ನು ನಿರ್ಮಿಸಲಾಗಿದೆ. ಈ ಗ್ರಾಮ ಪಂಚಾಯತ್‍ಗಳು ಸಂಗ್ರಹಿಸುವ ಕಸದಿಂದ ಪಡೆಯುವ ಆದಾಯವನ್ನು ಯೋಜನೆಯ ಯಶಸ್ವಿಯ ಮಾನದಂಡವಾಗಿ ಪರಿಗಣಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ತಿಳಿಸಿದರು.
ಶಾಸಕರಾದ ರುದ್ರೇಗೌಡ, ಕುಮಾರ ಬಂಗಾರಪ್ಪ, ಅಶೋಕ ನಾಯ್ಕ್, ಡಿ.ಎಸ್.ಅರುಣ್, ಹರತಾಳು ಹಾಲಪ್ಪ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
Leave a Comment