ಜಲಜೀವನ್ ಮಿಷನ್ ಯೋಜನೆ ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು: ಡಾ.ಎಸ್.ಸೆಲ್ವಕುಮಾರ್

ಮಾಸಿಕ ಕೆಡಿಪಿ ಸಭೆ
ಶಿವಮೊಗ್ಗ, ಜು.25 : ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಯನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಅವರು ತಿಳಿಸಿದರು.

ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಜಲಜೀವನ್ ಮಿಷನ್ ಪ್ರಥಮ ಹಂತದಲ್ಲಿ 666 ಜನವಸತಿಗಳಿಗೆ ನೀರು ಪೂರೈಸಲು, 626 ಕಾಮಗಾರಿಗಳಿಗೆ 148ಕೋಟಿ ರೂ. ಮಂಜೂರಾಗಿದ್ದು, 591ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬಾಕಿ ಕಾಮಗಾರಿಗಳು ಅನುಷ್ಟಾನ ಹಂತದಲ್ಲಿವೆ. ಯೋಜನೆಯ ಎರಡನೇ ಹಂತದಲ್ಲಿ 540 ಜನವಸತಿಗಳಿಗೆ ನೀರು ಒದಗಿಸಲು  136ಕೋಟಿ ರೂ. ಮಂಜೂರಾಗಿದ್ದು, ಕಾರ್ಯಾದೇಶ ನೀಡಲಾಗಿರುವ 389ಕಾಮಗಾರಿಗಳ ಪೈಕಿ 77ಕಾಮಗಾರಿಗಳು ಪೂರ್ಣಗೊಂಡಿವೆ. 3ಹಂತದಲ್ಲಿ 884ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, 77ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಿ: ಫಲಾನುಭವಿಗಳ ಆಯ್ಕೆ, ಟೆಂಡರ್ ಪ್ರಕ್ರಿಯೆಗಳನ್ನು ಎಲ್ಲಾ ಇಲಾಖೆಗಳು ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಿ ಕಾಮಗಾರಿಗಳ ಅನುಷ್ಟಾನವನ್ನು ಆರಂಭಿಸಬೇಕು. ಅನುಷ್ಟಾನ ಕಾರ್ಯಕ್ಕಾಗಿ ಮಾರ್ಚ್‍ವರೆಗೆ ವಿಳಂಬಿಸಬಾರದು ಎಂದು ಡಾ.ಸೆಲ್ವಕುಮಾರ್ ಅವರು ಸ್ಪಷ್ಟಪಡಿಸಿದರು.

ರಸಗೊಬ್ಬರ ಸರಿಯಾಗಿ ಹಂಚಿಕ ಮಾಡಿ: ಜಿಲ್ಲೆಯಲ್ಲಿ ಬಿತ್ತನೆ ಕಾರ್ಯಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ರಸಗೊಬ್ಬರ ಸಮಪರ್ಕವಾಗಿ ಹಂಚಿಕೆಯಾಗುವಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಅಗತ್ಯವಿರುವ ಕಡೆ ಹಂಚಿಕೆಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ವಸತಿ ಯೋಜನೆ: ಗ್ರಾಮೀಣ ವಸತಿ ಯೋಜನೆ ಅನುಷ್ಟಾನವನ್ನು ಚುರುಕುಗೊಳಿಸಬೇಕು. ಜಿಲ್ಲೆಯಲ್ಲಿ 2020ರಿಂದ ಇದುವರೆಗೆ 20286ಮನೆಗಳು ಮಂಜೂರಾಗಿದ್ದು, ಇವುಗಳ ಪೈಕಿ 11324ಮನೆಗಳು ಪ್ರಗತಿಯಲ್ಲಿವೆ. 8962 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭಿಸಿಲ್ಲ. ಅಂಬೇಡ್ಕರ್ ನಿವಾಸ್ ಯೋಜನೆಯಡಿ 2011-12ನೇ ಸಾಲಿನಲ್ಲಿ 1989 ಮನೆಗಳ ನಿರ್ಮಾಣ ಗುರಿ ನೀಡಲಾಗಿದ್ದು, 1215 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಬಸವ ವಸತಿ ಯೋಜನೆಯಡಿ 6451 ಮನೆಗಳ ಗುರಿ ನೀಡಲಾಗಿದ್ದು, 4835 ಫಲಾನುಭವಿಗಳನ್ನು ಗುರುತಿಸಲಾಗಿದೆ. ಯೋಜನೆ ಅನುಷ್ಟಾನಕ್ಕೆ ಇರುವ ತೊಡಕುಗಳನ್ನು ನಿವಾರಿಸಿ ಆದಷ್ಟು ಬೇಗನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.

ಗಂಗಾ ಕಲ್ಯಾಣ: ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಕಳೆದ ತಿಂಗಳು 24ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು ಇನ್ನೂ 60ಸಂಪರ್ಕ ಕಲ್ಪಿಸಲು ಬಾಕಿಯಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.