ಸರ್ಕಾರದಿಂದ ಸೌಲಭ್ಯ ಪಡೆಯುವ ಸಲುವಾಗಿ ಹಕ್ಕಿಪಿಕ್ಕಿ ಅಲೆಮಾರಿ ಜಾತಿ ಸಂರಕ್ಷಣಾ ಸಮಿತಿಯನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾಗಿದೆ: ರಾಜ್ಯಾಧ್ಯಕ್ಷ ಜಗ್ಗು
ಶಿವಮೊಗ್ಗ: ಸಮಾಜದಲ್ಲಿ ಜಾಗೃತಿ ಮೂಡಿಸಿ ಸರ್ಕಾರದಿಂದ ಸೌಲಭ್ಯ ಪಡೆಯುವ ಸಲುವಾಗಿ ಹಕ್ಕಿಪಿಕ್ಕಿ ಅಲೆಮಾರಿ ಜಾತಿ ಸಂರಕ್ಷಣಾ ಸಮಿತಿಯನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾಗಿದ್ದು, ಇದು ಇಡೀ ರಾಜ್ಯದಲ್ಲಿನ ಹಕ್ಕಿಪಿಕ್ಕಿ ಸಮುದಾಯವನ್ನು ಸಂಘಟನೆ ಮಾಡಲಿದೆ ಎಂದು ರಾಜ್ಯಾಧ್ಯಕ್ಷ ಜಗ್ಗು ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಅಲೆಮಾಡಿ ಸಮುದಾಯವಾಗಿರುವುದರಿಂದ ಸಮಾಜ ಯಾವುದೇ ಮಕ್ಕಳು ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಅನೇಕ ಮಕ್ಕಳು ಶಾಲೆಯನ್ನೇ ನೋಡಿಲ್ಲ. ಇದರಿಂದಾಗಿ ಸರ್ಕಾರಿ ಸೌಲಭ್ಯಗಳು ಈ ಸಮುದಾಯಕ್ಕೆ ಮರೀಚಿಕೆಯಾಗಿಯೇ ಉಳಿದಿವೆ. ಅವನ್ನು ಪಡೆಯುವಲ್ಲಿ ಶಿಕ್ಷಣ ಅತೀ ಮುಖ್ಯವಾಗಿರುವುದರಿಂದ ಮುಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ ಎಂದರು.
ಹಕ್ಕಿಪಿಕ್ಕಿ ಜನಾಂಗವನ್ನು ಸರ್ಕಾರ ಕಡೆಗಣಿಸಿದ್ದು, ಹಿಂದುಳಿದ ವರ್ಗಗಳಿಗೆ ಅಭಿವೃದ್ಧಿ ನಿಗಮ ಮಾಡಿದಂತೆ ಹಕ್ಕಿಪಿಕ್ಕಿ ಜನಾಂಗಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸಿ ಶಾಶ್ವತ ಸೂರು ಮತ್ತು ಶಿಕ್ಷಣಕ್ಕೆ ಸರ್ಕಾರ ಅನುದಾನ ನೀಡಬೇಕು. ಒಳಮೀಸಲಾತಿಯಿಂದ ಹಕ್ಕಿಪಿಕ್ಕಿ ಜನಾಂಗ ವಂಚನೆಗೊಳಗಾಗಿದ್ದು, ಇದನ್ನು ಕೂಡ ಸರಿಪಡಿಸಬೇಕೆಂದು ಅವರು ಆಗ್ರಹಿಸಿದರು.
ಸಮುದಾಯದವರು ಒಂದೇ ಕಡೆ ನಿಲ್ಲಲು ಅನುಕೂಲವಾಗುವಂತೆ ಸ್ವಂತ ಸೂರಿಲ್ಲ. ಕೆಲವು ಕಡೆಗಳಲ್ಲಿ ಮಾತ್ರ ನಿವೇಶನ ನೀಡಲಾಗಿದ್ದರೂ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರಿ ಸೌಲಭ್ಯಗಳು ಇರುವ ಬಗ್ಗೆ ಅರಿವಿಲ್ಲ. ಸರ್ಕಾರ ಸೌಲಭ್ಯಗಳನ್ನು ನೀಡಿದರೂ ಕೂಡ ಅವುಗಳನ್ನು ಪಡೆದುಕೊಳ್ಳುವ ಮಾರ್ಗ ಗೊತ್ತಾಗುತ್ತಿಲ್ಲ. ಹೀಗಾಗಿ ಇವೆಲ್ಲವುಗಳ ಅರಿವು ಮೂಡಿಸುವುದು ಸಂಘಟನೆಯ ಉದ್ದೇಶವಾಗಿದೆ ಎಂದರು.
ಹಕ್ಕಿಪಿಕ್ಕಿ ಸಮುದಾಯದ ಏಕೈಕ ಇಂಜಿನಿಯರ್ ಹಾಗೂ ಸಮಾಜಿಕ ಹೋರಾಟಗಾರ್ತಿ ಕುಮುದಾ ಮಾತನಾಡಿ, ಅರಣ್ಯ ಕಾಯಿದೆಯಿಂದಾಗಿ ಹಕ್ಕಿಪಿಕ್ಕಿ ಸಮುದಾಯವನ್ನು ಅರಣ್ಯದಿಂದ ಹೊರ ಹಾಕಲಾಗಿದೆ. ಇದರಿಂದಾಗಿ ಮೂಲ ಕಸುಬಿಗೆ ಹೊಡೆತ ಬಿದ್ದಿದೆ. ಬೇರೆ ಉದ್ಯೋಗ ಸಿಗುತ್ತಿಲ್ಲ. ಇದರಿಂದಾಗಿ ಶಿಕ್ಷಣ ಒಂದೇ ಸಮಾಜದ ಏಳಿಗೆಯ ಮಾರ್ಗವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಹಾದೇವಿ ಮತ್ತಿತರರು ಇದ್ದರು.
Leave a Comment