ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ
ಶಿವಮೊಗ್ಗ: ಹೆಲ್ಪಿಂಗ್ ಹ್ಯಾಂಡ್ಸ್, ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್, ಹಾಗೂ ಶಿವಗಂಗಾ ಯೋಗ ಕೇಂದ್ರ , ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ರವರು ಮನುಷ್ಯನ ಅತಿಯಾಸೆ ಯಿಂದಾಗಿ ಮರ ಗಿಡಗಳ ನಾಶ ಅಧಿಕವಾಗಿದ್ದು, ಇದನ್ನು ನಿಯಂತ್ರಿಸಿ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅದನ್ನು ಉಳಿಸಿ ರಕ್ಷಿಸಿ ಕೊಳ್ಳಬೇಕೆಂದು ಕರೆನೀಡಿದರು.
ಮುಂದುವರೆದು ಮಾತನಾಡಿದ ಅವರು ಮುಂದಿನ ಪೀಳಿಗೆಗೆ ನೀರು, ಕಾಡು, ಕಲ್ಮಶ ಇಲ್ಲದ ಭೂಮಿಯನ್ನು ನಾವೆಲ್ಲಾ ಬಿಟ್ಟು ಹೋಗಬೇಕಾಗಿದೆ ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಿ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಇತರ ಸಂಘ ಸಂಸ್ಥೆಗಳ ಜತೆ ಕೈಗೂಡಿಸಿ ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಸಂಚಾಲಕರು ಮತ್ತು ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್ ನ ನಿರ್ದೇಶಕರಾದ ಶ್ರೀಯುತ ಕೆ.ಸಿ.ಬಸವರಾಜ್ ರವರು ನೀರು, ಗಾಳಿ, ಮಲೀನ ಆಗದಂತೆ ತಡೆಯಲು ದೈನಂದಿನ ಕಸ ದ ವಿಲೇವಾರಿ ಯನ್ನು ಸರಿಯಾದ ರೀತಿಯಲ್ಲಿ ನಡೆಸಬೇಕು, ಇದಕ್ಕಾಗಿ ಸ್ಥಳೀಯ ಸಂಸ್ಥೆಗಳ ಜತೆ ನಾಗರೀಕ ಸಂಘ ಸಂಸ್ಥೆಗಳು ಕೈಜೋಡಿಸಿ ಶ್ರಮಿಸಬೇಕು ಈ ನಿಟ್ಟಿನಲ್ಲಿ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕಸದ ವಿಲೇವಾರಿ, ತ್ಯಾಜ್ಯದ ನಿರ್ವಹಣೆ ಮತ್ತು ಸಸಿಗಳನ್ನು ನೆಟ್ಟು ಬೆಳೆಸುವ ಬಗ್ಗೆ , ಪರಿಸರ ಸಂರಕ್ಷಣೆ ಬಗ್ಗೆ ಸ್ಥಳೀಯ ನಾಗರೀಕರ / ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳ ಜತೆ ನಿರಂತರವಾಗಿ ಕೆಲಸ ಮಾಡಲು ತೊಡಗಿದ್ದು ಇದಕ್ಕೆ ಹಾಗೂ ನಮ್ಮ ಶಿವಮೊಗ್ಗ ಜಿಲ್ಲೆಯನ್ನು ಸ್ವಚ್ಛ್ ಹಾಗೂ ಸುಂದರ ವನ್ನಾಗಿ ಉಳಿಸಿಕೊಳ್ಳಲು ಎಲ್ಲರ ಸಹಕಾರ ಕೋರಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀಯುತ ಮಾನು ರವರು ಮಾತನಾಡಿ ಪರಿಸರ ಮಾಲಿನ್ಯ ತಡೆಗಟ್ಟಲು ಎಲ್ಲರ ಸಾಮೂಹಿಕ ಪ್ರಯತ್ನ ಅಗತ್ಯವೆಂದು ತಿಳಿಸಿ ಪರಿಸರ ಸಂರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ಜಿಲ್ಲಾ ಪರಿಸರ ಅಧಿಕಾರಿ ಶ್ರೀಯುತ ಹರಿಕುಮಾರ್ ರವರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಅಂತರ್ ಜಲ ವಿಷವಾಗುವುದನ್ನು ತಪ್ಪಿಸಬೇಕು ಎಂದು ಹೇಳಿದರು.
ಶಿವಗಂಗಾ ಯೋಗ ಕೇಂದ್ರದ ಶ್ರೀಯುತ ರುದ್ರಾರದ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಯುತ ಸಂಕಣ್ಣ ನವರ್, ಶ್ರೀಯುತ ಮಹದೇವಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದು ಕೊನೆಯಲ್ಲಿ ಅತಿಥಿ ಗಣ್ಯರು ತುಂಗಾ ನದಿ ದಡದ ಬೆಕ್ಕಿನಕಲ್ಮಠದ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಜಿಲ್ಲಾದ್ಯಂತ ನಡೆಯಲಿರುವ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ನ ಪರಿಸರ ಜಾಗೃತಿ ಹಾಗೂ ಸಸಿಗಳನ್ನು ನೆಟ್ಟು ಬೆಳೆಸುವ ಆಂದೋಲನಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಪರಿಸರ ಗೀತೆ ಹಾಡಿದರು.
Leave a Comment