ಯಲಹಂಕದ ನಾಡಪ್ರಭು ಕೆಂಪೆಗೌಡ ಜಯಂತಿಯ ಶುಭಾಶಯಗಳು



ಕರ್ನಾಟಕದ ಇತಿಹಾಸದಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರ ಆಡಳಿತ ಅದ್ಭುತವಾದುದು. ವಿಜಯನಗರ ರಾಜರುಗಳ ಸಾಮಂತರಾಗಿದ್ದ ಈ ಮಾಂಡಲಿಕರು ಜನಮನ್ನಣೆಯನ್ನು ಗಳಿಸಿ ನಾಡಪ್ರಭು ಎಂದು ಪ್ರಸಿದ್ಧರಾಗಿದ್ದರು.
     ರಣಭೈರೇಗೌಡ ನಿಂದ ಸ್ಥಾಪನೆಯಾದ ಈ ವಂಶ ಬೆಂಗಳೂರನ್ನು ಕೇಂದ್ರವನ್ನಾಗಿ ಮಾಡಿಕೊಂಡು ಆಳತೊಡಗಿತ್ತು. ಇವರು ಹಿಂದೂಧರ್ಮೀಯರು ಒಕ್ಕಲಿಗ ಜಾತಿಯವರು ಭೈರವನ ಆರಾಧಕರು ಆಗಿದ್ದರು. ಈ ಮನೆತನದ ಕೆಂಪನಂಜೇಗೌಡ ಮತ್ತು ಲಿಂಗಮ್ಮ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯವನು ಕೆಂಪೇಗೌಡ. 1510ರಲ್ಲಿ ಈತ ಜನಿಸಿದರು.
     ಬಾಲ್ಯದಲ್ಲಿ ಕತ್ತಿ ವರಸೆ ಕುದುರೆ ಸವಾರಿ ಮಲ್ಲಯುದ್ಧ ಕಲಿತ ಇವರು ವಿಜಯದಶಮಿ ಮಲ್ಲಯುದ್ಧ ಸ್ಪರ್ದೆ ಯಲ್ಲಿ  ಜಗಜಟ್ಟಿ ತಿರುಮಲರಾಯನನ್ನು ಸೋಲಿಸಿ ಪ್ರಸಿದ್ಧನಾಗುತ್ತಾನೆ.1528ರಲ್ಲಿ ಯುವರಾಜನಾಗಿ ಪಟ್ಟಾಭಿಷೇಕ ನಡೆದು ಚೆನ್ನಮ್ಮ ಎಂಬಾಕೆಯೊಂದಿಗೆ ಇವರ ಮದುವೆಯಾಗುತ್ತದೆ.1531ರಲ್ಲಿ ಪೂರ್ಣ ಅಧಿಕಾರವನ್ನು ಪಡೆದ ಇವರು ವಿಜಯನಗರದ ಪರವಾಗಿ ಅನೇಕ ಯುದ್ಧಗಳಲ್ಲಿ ಭಾಗವಹಿಸಿ ಗೆಲುವನ್ನು ಸಾದಿಸುತ್ತಾರೆ.. ಇವನ ಸಾಹಸಕ್ಕೆ ಮೆಚ್ಚಿದ ವಿಜಯನಗರದ ಅರಸ ಅಚ್ಚುತರಾಯನು ಯಲಹಂಕ ವರ್ತೂರು ಬೇಗೂರು ಹಲಸೂರು ಕೆಂಗೇರಿ ತಲಘಟ್ಟಪುರ ಜಿಗಣಿ ಕನ್ನಲ್ಲಿ ಕುಂಬಳಗೋಡು ಬಾಣವರ ಹೆಸರುಘಟ್ಟ ಹೋಬಳಿಗಳನ್ನು ಕೆಂಪೇಗೌಡನಿಗೆ ವಹಿಸಿಕೊಟ್ಟು ಅಮರನಾಯಕ ಪಟ್ಟವನ್ನು ನೀಡುತ್ತಾರೆ. ವಿಜಯನಗರದ ವೈಭವವನ್ನು ಕಂಡು ತಾವು ಕೂಡ ಯಲಹಂಕದ ಬಳಿಯಲ್ಲಿ ಪ್ರಮುಖ ಪಟ್ಟಣವನ್ನು ಕಟ್ಟಬೇಕೆಂದು ಯೋಚಿಸುತ್ತಾರೆ.
     ಪೂರ್ವಕ್ಕೆ ಹಲಸೂರು ಪಶ್ಚಿಮಕ್ಕೆ ಅರಳೇಪೇಟೆ ಉತ್ತರಕ್ಕೆ ಯಲಹಂಕ ದಕ್ಷಿಣಕ್ಕೆ ಆನೇಕಲ್ ಬರುವಂತೆ ಮಾಡಿ ಬೆಂಗಳೂರು ನಗರವನ್ನು ನಿರ್ಮಿಸುತ್ತಾರೆ. ಈ ರಾಜಧಾನಿಗೆ 4 ಮಹಾದ್ವಾರಗಳ ಇತ್ತು ಪೂರ್ವಕ್ಕೆ ಹಲಸೂರು ಪಶ್ಚಿಮಕ್ಕೆ ಸೊಂಡೆಕೊಪ್ಪ ಉತ್ತರಕ್ಕೆ ಯಲಹಂಕ ದಕ್ಷಿಣಕ್ಕೆ ಆನೇಕಲ್ ದ್ವಾರವನ್ನು ನಿರ್ಮಿಸುತ್ತಾರೆ ಇದಲ್ಲದೆ 5 ಚಿಕ್ಕ ದ್ವಾರಗಳನ್ನು ವರ್ತೂರು ಕೆಂಗೇರಿ ಕನಕಪುರ ಸರ್ಜಾಪುರ ಯಶವಂತಪುರದಲ್ಲಿ ನಿರ್ಮಿಸುತ್ತಾರೆ. ದಕ್ಷಿಣದ ದ್ವಾರಬಾಗಿಲನ್ನು ನಿರ್ಮಿಸುವಾಗ ಇದು ಪದೇಪದೇ ಬಿದ್ದುಹೋಗುತ್ತದೆ ಆಸ್ಥಾನದ ಜ್ಯೋತಿಷ್ಯರನ್ನು ಕೇಳಿದಾಗ ಗರ್ಭಿಣಿಯಾದ ಹೆಂಗಸನ್ನು ಬಲಿಕೊಡಬೇಕೆಂದು ಶಾಸ್ತ್ರ ಹೇಳುತ್ತಾರೆ. ಇದರಿಂದ ಗೌಡರು ಚಿಂತಿತರಾಗುತ್ತಾರೆ. ಈ ಸಂದರ್ಭದಲ್ಲಿ ಕೆಂಪೇಗೌಡರ ಮಗ ಸೋಮಣ್ಣ ಗೌಡರ ಪತ್ನಿ ಲಕ್ಷ್ಮೀದೇವಿಯು ಯಾರಿಗೂ ತಿಳಿಸದೆ ತಾನು ರಾತ್ರಿ ಕಾಲದಲ್ಲಿ ಬಂದು ಕಂಬಕ್ಕೆ ತನ್ನನ್ನು ತಾನೇ ಅರ್ಪಿಸಿಕೊಳ್ಳುತ್ತಾಳೆ. ತೀವ್ರ ಮನನೊಂದ ಗೌಡರು ಆಕೆ ತೀರಿಕೊಂಡ ಸ್ಥಳದಲ್ಲಿ ಒಂದು ಗುಡಿಯನ್ನು ಕಟ್ಟಿಸುತ್ತಾರೆ ಇಂದಿಗೂ ಕೋರಮಂಗಲದ ಬಳಿ ಲಕ್ಷ್ಮಮ್ಮನವರ ದೇವಾಲಯ ಹಾಗೂ ಸ್ಮಾರಕ ಸ್ಥಳವಿದೆ.
     ರಾಜಧಾನಿ ನಿರ್ಮಾಣವಾದ ಮೇಲೆ 64 ಪೇಟೆಗಳನ್ನು ನಿರ್ಮಿಸುತ್ತಾರೆ ಇಂದು 54 ಪೇಟೆಗಳ ಹೆಸರು ಮಾತ್ರ ಇತಿಹಾಸಕಾರರಿಗೆ ಗೊತ್ತಾಗಿದೆ. ಬೇರೆ ಬೇರೆ ಜಾತಿ ಯವರಿಗಾಗಿ ಕುಂಬಾರಪೇಟೆ ಗಾಣಿಗರ ಪೇಟೆ ಮಡಿವಾಳ ಪೇಟೆ ಗೊಲ್ಲರ ಪೇಟೆ ಮೇದಾರ ಪೇಟೆ ಕುರುಬರ ಪೇಟೆ ಕುಂಚಿಟಿಗರ ಪೇಟೆ ಉಪ್ಪಾರ ಪೇಟೆ ಸುಲ್ತಾನ ಪೇಟೆ ಗಳನ್ನು ಕಟ್ಟಿಸುತ್ತಾರೆ.
     ರೈತರಿಗಾಗಿ ಕುಡಿಯುವ ನೀರಿಗಾಗಿ ಕೆಂಪಾಂಬುದಿಕೆರೆ ಸಂಪಂಗಿರಾಮ ಕೆರೆ  ಕಾರಂಜಿ ಕೆರೆ  ಕೆಂಪಾಪುರ ಅಗ್ರಹಾರ ಕೆರೆ  ಗಿಡ್ಡಪ್ಪನ ಕೆರೆ ಧರ್ಮಾಂಬುಧಿ ಕೆರೆ ಚೆನ್ನಮ್ಮನಕೆರೆ ಹಲಸೂರು ಕೆರೆ ಸಿದ್ಧಿ ಕಟ್ಟಿ ಕರೆ ಗಿಡ್ಡಪ್ಪನ ಕೆರೆ ಮುಂತಾದ ಕೆರೆಗಳನ್ನು ನಿರ್ಮಾಣ ಮಾಡುತ್ತಾರೆ.ಅಲ್ಲದೆ100ಕ್ಕೂ ಹೆಚ್ಚು ಕಲ್ಯಾಣಿಗಳನ್ನು ನಿರ್ಮಿಸುತ್ತಾರೆ. ನಗರದ ಮುಖ್ಯರಸ್ತೆಯ ಎರಡೂ ಬದಿಯಲ್ಲೂ ತಂಪಾದ ನೆರಳು ನೀಡುವುದಕ್ಕೆ ಹೊಂಗೆಯ ಮರಗಳನ್ನು ಹಾಕಿಸುತ್ತಾರೆ ಮತ್ತು ಈ ಮರದಲ್ಲಿ ಬಿಟ್ಟ ಕಾಯಿಗಳಿಂದ ಹೊಂಗೆ ಎಣ್ಣೆ ತಯಾರಿಸಿ ದೀಪಗಳಿಗೆ ಉಪಯೋಗಿಸುತ್ತಿದ್ದರು
ಬೆಂಗಳೂರು ಕೋಟೆ ಯು ಹೊರಭಾಗದಲ್ಲಿ 4ರಾಜೋದ್ಯಾನ ನಿರ್ಮಿಸಿದ್ದರು.
     ನಾಡಪ್ರಭುಗಳು ಆಸ್ಥಾನದಲ್ಲಿ 8 ಜನ ಮಂತ್ರಿಗಳನ್ನು ನೇಮಿಸಿಕೊಂಡಿದ್ದರು. ಇವರ ಕಾಲದಲ್ಲಿ ದೊಡ್ಡ ಬಸವನಗುಡಿ ಗಣಪತಿ ದೇವಾಲಯ ಗವಿಗಂಗಾಧರೇಶ್ವರ ಗುಹಾಂತರ ದೇವಾಲಯ ಹಲಸೂರಿನ ಸೋಮೇಶ್ವರ ದೇವಾಲಯ ನಗರದೇವತೆ ಅಣ್ಣಮ್ಮ ಆಂಜನೇಯನ ಗುಡಿ ಶಿವಗಂಗೆಯಲ್ಲಿ ದೇವಾಲಯಗಳನ್ನು ಕಟ್ಟಲಾಯಿತು. ಬೆಂಗಳೂರು ಕೋಟೆ ಸಾವನದುರ್ಗ ಕೋಟೆ ಹುಲಿಯೂರುದುರ್ಗ ಕೋಟೆ ರಾಮದುರ್ಗ ಕೋಟೆ ಮಾಗಡಿ ಕೋಟೆ ಹುತ್ರಿ ದುರ್ಗದ ಕೋಟೆ ಬೈರವ ದುರ್ಗದ ಕೋಟೆ  ರಾಮಗಿರಿ ದುರ್ಗ ಇವರು ಕಟ್ಟಿಸಿದ ಪ್ರಮುಖ ಕೋಟೆಗಳು.
     ಆದರೆ ಕೆಂಪೇಗೌಡರ ಅಭಿವೃದ್ಧಿಯನ್ನು ಕಂಡು ಹಾಗೂ ಸ್ವತಂತ್ರವಾಗಿ ಅವರು ಭೈರವ ನಾಣ್ಯವನ್ನು ಅಚ್ಚು ಹಾಕಿಸಿದನ್ನು ಕಂಡು ವಿಜಯನಗರದ ಅರಸರು ಇವರನ್ನು ಬಂಧಿಸಿ 5 ವರ್ಷಗಳ ಕಾಲ ಆನೆಗೊಂದಿ ಸೆರೆಮನೆಗೆ ಹಾಕಿದರು.1565ರ ತಾಳಿಕೋಟೆ ಯುದ್ಧದ ಸಮಯದಲ್ಲಿ ಬಿಡುಗಡೆಯಾದರೂ ಕೆಂಪೇಗೌಡರ ಮಕ್ಕಳು ಮತ್ತು ಸೈನಿಕರು ಸೇರಿ 2000 ಬೆಂಗಳೂರಿನ ಸೈನಿಕರು ವಿಜಯನಗರದ ಪರವಾಗಿ ಯುದ್ಧದಲ್ಲಿ ಭಾಗವಹಿಸಿದರು. ಆದರೆ ಸೈನ್ಯ ಸೋತು ವಿಜಯನಗರ ಪತನಗೊಂಡಿತು. ಈ ಅವಕಾಶವನ್ನು ಬಳಸಿಕೊಂಡ ಶತ್ರುಗಳು ಬೆಂಗಳೂರಿನ ಮೇಲೆ ದಾಳಿ ಮಾಡಿದಾಗ ಕೆಂಪಾಪುರ ಎಂಬಲ್ಲಿ ನಡೆದ ಯುದ್ಧದಲ್ಲಿ ಕೆಂಪೇಗೌಡರು ಮಡಿದರು.1570.
     ಇಂದಿನ ಕೆಂಪಾಪುರ ಬಸವಣ್ಣ ದೇವಾಲಯದಲ್ಲಿ ಅವರ ಸಮಾಧಿ ಇದ್ದು ಸಮಾಧಿಯ ಗೋಪುರದ ಮೇಲೆ ಹಿರಿಯ ಕೆಂಪೇಗೌಡರು ಐಕ್ಯವಾದ ಸ್ಥಳ ಎಂದು ಶಾಸನದಲ್ಲಿ ಬರೆದಿದೆ.
ಡಾ.ಕೆ.ಜಿ.ವೆಂಕಟೇಶ್ ಇತಿಹಾಸ ಸಂಶೋಧಕರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.