ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಗಳೇ ನಗರದ ಪ್ರವಾಹ ಪರಿಸ್ಥಿತಿಗೆ ಕಾರಣ:ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಕ್ರೋಶ

ಶಿವಮೊಗ್ಗ: ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಗಳೇ ನಗರದ ಪ್ರವಾಹ ಪರಿಸ್ಥಿತಿಗೆ ಕಾರಣ. ಇದರ ಹಿಂದೆ ಭಾರೀ ಭ್ರಷ್ಟಾಚಾರ ನಡೆದಿದ್ದು, ನೂರಾರು ಕೋಟಿ ಲೂಟಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂರು ದಿನಗಳಿಂದ ಮಳೆ ಸುರಿದಿದ್ದು, ಇಡೀ ನಗರದಲ್ಲಿ ಪ್ರವಾಹ ಉಂಟಾಗಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಸಾಗದೇ ರಸ್ತೆ ಮೇಲೆ ಹರಿಯುತ್ತಿದೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲವೂ ಅವೈಜ್ಞಾನಿಕವಾಗಿದ್ದು, ಭ್ರಷ್ಟತೆಯನ್ನು ಎತ್ತಿ ತೋರಿಸುತ್ತಿದೆ. ಪಾಲಿಕೆ ಸೇರಿದಂತೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಶಾಸಕರ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಕಳೆದ ಎರಡು ದಿನಗಳ ಮಳೆಯಿಂದಲೇ ಅನೇಕ ಮನೆಗಳು ಕುಸಿದು ಬಿದ್ದಿವೆ. ಬಡವರ ಮನೆಯ ಆಹಾರ ಸಾಮಗ್ರಿಗಳೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿ ಉಪವಾಸ ಬೀಳುವಂತಾಗಿದೆ. ಸ್ಮಾರ್ಟ್ ಸಿಟಿಯ ಕಿಕ್ ಬ್ಯಾಕ್ ಎದ್ದು ಕಾಣುತ್ತಿದೆ. ಬಿಜೆಪಿಯವರು ಮಸೀದಿ, ಮಂದಿರದ ವಿಷಯಗಳ ಕಡೆ ತಿರುಗಿ ಅಭಿವೃದ್ಧಿಯನ್ನೇ ಮರೆತಿದ್ದಾರೆ. ಇಲ್ಲಿ ದೇವಾಲಯವಿತ್ತು. ಅದನ್ನು ಕೆಡವಿದ್ದಾರೆ ಎಂದು ಇತಿಹಾಸದ ಪುಟಗಳನ್ನು ತಿರುವುತ್ತಾ ಧಾರ್ಮಿಕ ವಿಷ ಬೀಜ ಬಿತ್ತುತ್ತಾ ರಾಜ್ಯವೂ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಮರೆತು ಹೋಗಿದೆ ಎಂದು ಆರೋಪಿಸಿದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸ್ಮಾರ್ಟ್ ಸಿಟಿಯಲ್ಲಿದ್ದ ಅಧಿಕಾರಿಗಳು ಕೋಟ್ಯಂತರ ರೂ. ಹಣ ಸಂಗ್ರಹಣೆ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ತನಿಖೆ ನಡೆಸಲು ಸಿದ್ಧವಿದೆ. ಆದರೆ, ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ವಿಫಲವಾಗುತ್ತದ್ದಾರೆ. ನಿರ್ಮಿತಿ ಕೇಂದ್ರದ ಅಧಿಕಾರಿಯನ್ನು ಬಿಜೆಪಿ ಸಂರಕ್ಷಿಸುತ್ತಿದೆ. ಆತ ಇಲ್ಲಿಯೇ ಠಿಕಾಣಿ ಹೂಡಿದ್ದಾನೆ. ಜಿಲ್ಲಾ ಮಂತ್ರಿಯಂತೂ ಪತ್ತೆಯೇ ಇಲ್ಲ. ಕೊನೆ ಪಕ್ಷ ಸಂಸದರು ಬಂದರೂ ಸಚಿವರು ಬಾರಲಿಲ್ಲ ಎಂದರು.
ಬಡವರು ಹಿಡಿಶಾಪ ಹಾಕುತ್ತಿದ್ದಾರೆ. ಇವರ ಯೋಗ್ಯತೆಗೆ ಬೆಂಕಿ ಹಾಕಬೇಕು ಎಂದು ಹೇಳುತ್ತಿದ್ದಾರೆ. ಇನ್ನಾದರೂ ಆಡಳಿತ ಯಂತ್ರ ಚುರುಕುಗೊಳ್ಳಬೇಕು. ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕು. ಬಡವರಿಗೆ ಆಹಾರದ ಕಿಟ್ ನೀಡಬೇಕು. ಅವೈಜ್ಞಾನಿಕವಾಗಿ ವಿಧಿಸಿರುವ ಆಸ್ತಿ ತೆರಿಗೆ, ನೀರಿನ ಕಂದಾಯ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಚಂದ್ರಭೂಪಾಲ್, ರಾಮೇಗೌಡ, ರೇಖಾ ರಂಗನಾಥ್, ಯಮುನಾ ರಂಗೇಗೌಡ, ವೈ.ಹೆಚ್. ನಾಗರಾಜ್, ಡಾ. ಶ್ರೀನಿವಾಸ ಕರಿಯಣ್ಣ, ವಿನಾಯಕ ಮೂರ್ತಿ, ಚಂದನ್ ಮೊದಲಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.