ಸರ್ಕಾರದ ಯೋಜನೆಗಳ ಲಾಭ ಪಡೆಯಲು ಕಾರ್ಮಿಕರಿಗೆ ಕರೆ :

ದೇಶದ ಅರ್ಥಿಕ ಪ್ರಗತಿಗೆ ಜೀವನಾಡಿಯಂತಿರುವ ಶ್ರಮಿಕರ ನೆಮ್ಮದಿಯ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಸರ್ಕಾರವು ಕಾರ್ಮಿಕ ಇಲಾಖೆಯ ಮೂಲಕ ರೂಪಿಸಿ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಲಾಭವನ್ನು ಅರ್ಹರು ಪಡೆದುಕೊಳ್ಳುವಂತೆ ಕಾರ್ಮಿಕ ನಿರೀಕ್ಷಕ ಭೀಮೇಶ್ ಅವರು ಹೇಳಿದರು.

ಅವರು ಇಂದು ಕಾರವಾರ ಜಿಲ್ಲೆಯ ಉತ್ತರ ಕನ್ನಡ ರೋಲರ್ ಸ್ಕೇಟಿಂಗ್‌ ಕ್ಲಬ್ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಕಾರ್ಮಿಕರಿಗಾಗಿರುವ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಾರವಾರದಿಂದ ಬೆಂಗಳೂರಿನವರೆಗೆ ಹೊರಟಿರುವ ರೋಲಿಂಗ್ ಸ್ಕೇಟಿಂಗ್ ಜಾಗೃತಿ ಜಾಥಾವನ್ನು ಸ್ವಾಗತಿಸಿ ಮಾತನಾಡುತ್ತಿದ್ದರು.

ಈ ಜಾಗೃತಿ ಜಾಥಾವು ಮೇ 6ರಂದು ಕರ್ನಾಟಕದ ಕಾಶ್ಮೀರ ಕಾರವಾರದಿಂದ ಹೊರಟು ಮೇ 12ರಂದು ಬೆಂಗಳೂರು ತಲುಪಲಿದೆ. ಸುಮಾರು 650ಕಿ.ಮೀ.ಕ್ರಮಿಸುವ ಈ ಜಾಥಾವನ್ನು ಮೇ 12ರಂದು ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಸ್ವಾಗತಿಸಲಿದ್ದಾರೆ ಎಂದರು. ಈ ಅವಧಿಯಲ್ಲಿ ಜಾಥಾ ಸಾಗುವ ಮಾರ್ಗಗಳಲ್ಲಿ ಎದುರಾಗುವ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಜನರಲ್ಲಿ ಕಾರ್ಮಿಕ ಇಲಾಖೆಯ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘು ಅವರು ಮಾತನಾಡಿ, ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೈಲರ್ ಗಳು, ಮೆಕ್ಯಾನಿಕ್  ಅಗಸರು  ಅಕ್ಕಸಾಲಿಗರು  ಕಮ್ಮಾರರು  ಕುಂಬಾರರು  ಕ್ಷೌರಿಕರು  ಭಟ್ಟಿ ಕಾರ್ಮಿಕರು ಸೇರಿದಂತೆ ಅನೇಕ ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುವವರನ್ನು ಗುರುತಿಸಿ, ಹಲವು ಸೌಲಭ್ಯಗಳನ್ನು ನೀಡಲಿದೆ ಎಂದರು.

ಈ ಸೌಲಭ್ಯಗಳನ್ನು ಪಡೆಯಲಿಚ್ಚಿಸುವ ಕಾರ್ಮಿಕರು ಇಲಾಖೆಯ ಜಾಲತಾಣದಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಈ ಜಾಥಾದಲ್ಲಿ ಕಾರವಾರ ಸ್ಕೇಟಿಂಗ್‌ ಅಸೋಷಿಯೇಷನ್‌ನ 25ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 40ಜನ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಶ್ರೀಮತಿ ಸುಖಿತಾ, ಸ್ಕೇಟಿಂಗ್ ಕೋಚ್ ದಿಲೀಪ್, ಸತೀಶ್, ಸಚಿನ್  ಕಿರಣ್  ಶರ್ಮಾ ಅಜಯ್ ಮುಂತಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.