ದಾಂಪತ್ಯ ಜೀವನದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಅಭಿನಂದನಾ ಗ್ರಂಥ ‘ಕತ್ತಿಗೆ ಚನ್ನ’ ಕೃತಿಯ ಲೋಕಾರ್ಪಣೆ
ಶಿವಮೊಗ್ಗ: ಸಾಹಿತಿ ಹಾಗೂ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಕತ್ತಿಗೆ ಚನ್ನಪ್ಪ ಅವರಿಗೆ 70 ವರ್ಷ ಹಾಗೂ ದಾಂಪತ್ಯ ಜೀವನದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಅವರ ಅಭಿಮಾನಿಗಳು ಅರ್ಪಿಸುತ್ತಿರುವ ಅಭಿನಂದನಾ ಗ್ರಂಥ ‘ಕತ್ತಿಗೆ ಚನ್ನ’ ಕೃತಿಯ ಲೋಕಾರ್ಪಣೆ ಸಮಾರಂಭವನ್ನು ಮೇ 8 ರಂದು ಬೆಳಗ್ಗೆ 10.30 ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೆಬಿಸಿ ಸೇವಾ ಟ್ರಸ್ಟ್ ಹಾಗೂ ಶ್ರೀ ಕತ್ತಿಗೆ ಚನ್ನಪ್ಪ ಅಭಿನಂದನಾ ಸಮಿತಿ ಪರವಾಗಿ ಶಿಕ್ಷಣ ಸಂಯೋಜಕ ಡಾ. ಬಸವರಾಜಪ್ಪ ಎಂ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕತ್ತಿಗೆ ಚನ್ನಪ್ಪನವರ ಬದುಕು ತೆರೆದಿಟ್ಟ ಪುಸ್ತಕದಂತೆ. ಕಪಟ ವಂಚನೆಗಳಿಲ್ಲದ ಮುಗ್ಧತೆ, ಪ್ರಾಮಾಣಿಕತೆ ಮತ್ತು ಕ್ರಿಯಾಶೀಲತೆಯಿಂದ ಸಮಾಜದೊಡನೆ ಒಂದಾಗಿ ಬೆರೆತು ಕಲಾ ಸಂಸ್ಕೃತಿ ಕಟ್ಟಿದವರು ಎಂದರು.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಸ್ನೇಹ ಜೀವಿ, ಸಹೃದಯಿ, ಯೋಜನಾಬದ್ಧ ನೀತಿ ನಿರೂಪಣೆಗಳನ್ನು, ಮಡಿಲು ತುಂಬಿದ ವಿನಯ ವಂತಿಕೆಯನ್ನು, ಕನ್ನಡ ನಿಷ್ಠೆಯನ್ನು, ವೈಚಾರಿಕಾ ಚಿಂತನೆ, ಸ್ಥಳೀಯ ಸಂಸ್ಥೆಗಳ ಮಾದರಿ, ಅವರ ಸಂಘಟನಾ ಚತುರತೆಯನ್ನು ಅವರ ಆಪ್ತ ಅಭಿಮಾನಿ ಮಿತ್ರ ಬಳಗ ‘ಕತ್ತಿಗೆ ಚನ್ನ’ ಎಂಬ ಅಭಿನಂದನಾ ಗ್ರಂಥ ಹೊರತಂದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬಾಳಾಸಾಹೇಬ್ ಲೋಕಾಪುರ ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡುವರು. ಸಮಾರಂಭವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು, ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶಿವಮೊಗ್ಗ ಮಲ್ನಾಡ್ ಪ್ರಿಂಟಿಂಗ್ ಪ್ರೆಸ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಶರಣ ತತ್ವದ ಕಾಯಕ ಜೀವಿ ಎನ್. ಕಿರಣ್ ಮತ್ತು ಹೇಮಾ ಅವರ ಮದುವೆಯನ್ನು ವಚನ ಮಾಂಗಲ್ಯ ರೀತಿಯಲ್ಲಿ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಿರಣ್ ದೇಸಾಯಿ, ಚಂದ್ರಕಲಾ ಮೊದಲಾದವರಿದ್ದರು.

Leave a Comment