ಶಿವಮೊಗ್ಗದಲ್ಲಿ ಗಾಂಜಾ- ಡ್ರಗ್ಸ್ ಹಾವಳಿ: ಕಠಿಣ ಕಾನೂನು ಕ್ರಮಕ್ಕೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ ಆಗ್ರಹ
ಶಿವಮೊಗ್ಗ: ಶಿವಮೊಗ್ಗದಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದ್ದು, ಮತ್ತು ಕಿಡಿಗೇಡಿಗಳು ಹೊರವಲಯದಲ್ಲಿ ರಾತ್ರಿ ವೇಳೆ ವಾಹನಗಳನ್ನು ಅಡ್ಡಗಟ್ಟಿ ಸವಾರರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕುತ್ತಿರುವುದನ್ನು ಪೊಲೀಸ್ ಇಲಾಖೆ ಕೂಡಲೇ ನಿಯಂತ್ರಿಸಿ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಿಬೇಕೆಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ ಒತ್ತಾಯಿಸಿದರು.
ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಾಂತವಾಗಿದ್ದ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರಲ್ಲಿ ಅಶಾಂತಿ ಮೂಡಿಸಿ ಭಯದ ವಾತಾವರಣ ಸೃಷ್ಠಿಸುತ್ತಿರುವವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ಸಾಧನೆಗೆ ಯುವಕರು ಸಹ ಸ್ಪಂದಿಸಿದ್ದು, ಯುವ ಮೋರ್ಚಾ ಜಿಲ್ಲೆಯಲ್ಲಿ ಧನಾತ್ಮಕವಾಗಿ ತಂಡ ರಚಿಸಿಕೊಂಡು ಸಂಘಟನೆಯಾಗಿ ಬೆಳೆಯುತ್ತಿದೆ ಎಂದರು.
ಜಿಲ್ಲೆಯ ಅಭಿವೃದ್ಧಿ ಮಧ್ಯದಲ್ಲಿ ಸಮಾಜದಲ್ಲಿ ಭೀತಿ ಉಂಟು ಮಾಡುವ ಘಟನೆಗಳು ನಡೆಯುತ್ತಿವೆ. ಹರ್ಷ ಕೊಲೆ, ಸೂಳೆಬೈಲ್ ಹಾಗೂ ಇನ್ನಿತರ ಕಡೆ ಹಲ್ಲೆಗಳು ಹೆಚ್ಚಾಗುತ್ತಿದ್ದು, ಕಳೆದ 6 ತಿಂಗಳಿಂದ ಕಾರಣವಿಲ್ಲದೇ ಹಾಗೂ ವೈಯಕ್ತಿಕ ದ್ವೇಷವಿಲ್ಲದೇ ಇಂತಹ ಘಟನೆಗಳು ನಡೆಯುತ್ತಿವೆ ಎಂದರು.
ಪೊಲೀಸರು ಇತ್ತೀಚೆಗೆ ಹಲವರನ್ನು ಬಂಧಿಸಿ ಪ್ರಕರಣ ದಾಖಲಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ, ಡ್ರಗ್ಸ್ ಪ್ರಕರಣಗಳಲ್ಲಿ ಡೋಪಿಂಗ್ ಟೆಸ್ಟ್ ಅನ್ನು ಕಡ್ಡಾಯ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಬಡಾವಣೆಗಳಲ್ಲೇ ಇಂತಹ ಘಟನೆಗಳು ನಡೆಯುತ್ತಿದ್ದು, ಅಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಬೇಕು. ಇದಕ್ಕಾಗಿ ವಿಶೇಷ ತಂಡ ರಚಿಸಿ ಹತೋಟಿಗೆ ತರಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಗಣೇಶ್ ಬಿಳಕಿ, ಸುಹಾಸ್ ಶಾಸ್ತ್ರಿ, ಪಾಲಿಕೆಸದಸ್ಯ ಇ. ವಿಶ್ವಾಸ್, ಪ್ರಮುಖರಾದ ದರ್ಶನ್, ಅಭಿಷೇಕ್, ರಾಜೇಶ್, ಅಶೋಕ್, ವಿನ್ಸೆಂಟ್ ರೋಡ್ರಿಗಸ್ ಉಪಸ್ಥಿತರಿದ್ದರು.
Leave a Comment