ಮತಾಂತರ ನಿಷೇಧ ಕಾಯ್ದೆ ಚರ್ಚೆ ನಡೆದ ಬಳಿಕ ಜಾರಿಯಾಗುವುದು ಸೂಕ್ತ : ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತಕುಮಾರ್ ಕೆನಡಿ

ಶಿವಮೊಗ್ಗ: ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುತ್ತಿರುವುದಕ್ಕೆ ಸ್ವಾಗತವಿದೆ. ಆದರೆ, ಈ ಬಗ್ಗೆ ಚರ್ಚೆ ನಡೆದ ಬಳಿಕ ಜಾರಿಯಾಗುವುದು ಸೂಕ್ತ ಎಂದು ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತಕುಮಾರ್ ಕೆನಡಿ ಹೇಳಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮತಾಂತರ ನಿಷೇಧ ಕಾಯ್ದೆ ಜಾರಿಗೊಳ್ಳುತ್ತಿರುವುದು ಧಾರ್ಮಿಕ ಸಂರಕ್ಷಣಾ ಕಾಯ್ದೆಯಾಗಿದೆ. ಇದಕ್ಕೆ ಸಮಾಜದಲ್ಲಿ ಆತಂಕವಿಲ್ಲ. ಈಗಿರುವ ಸಮಸ್ಯೆಗಳು ನಿಧಾನವಾಗಿ ಬಗೆಹರಿಯಲಿದೆ ಎಂದರು.
ಬಿಜೆಪಿ ಸರ್ಕಾರ ಯಾವುದೇ ಸಮುದಾಯವನ್ನು ನಿರ್ಲಕ್ಷಿಸುತ್ತಿಲ್ಲ. ಕ್ರೈಸ್ತ ಸಮುದಾಯ ಸದೃಢವಾಗಿದೆ. ಕಾಯ್ದೆ ಜಾರಿ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ವಿರೋಧವೂ ಇಲ್ಲ. ರಾಜ್ಯದಲ್ಲಿ ಕ್ರೈಸ್ತ ಸಮುದಾಯ ಅತ್ಯಂತ ಸುರಕ್ಷಿತವಾಗಿದೆ. ಹಾಗೂ ಬೇರು ಮಟ್ಟದಲ್ಲಿ ಸಬಲೀಕರಣವಾಗುತ್ತಿದೆ ಎಂದ ಅವರು, ಸರ್ಕಾರದ ನಿರ್ಧಾರಗಳನ್ನು ಗೌರವಿಸಬೇಕಾಗಿದೆ ಎಂದರು.
2009 ರ ವರೆಗೆ ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಯಾವುದೇ ಸರ್ಕಾರ ಕ್ರೈಸ್ತ ಅಭಿವೃದ್ಧಿ ಸಮಿತಿ ರಚಿಸಲು ಕಾಳಜಿ ವಹಿಸಿರಲಿಲ್ಲ. ಆದರೆ, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಸಮಿತಿ ರಚಿಸಿ 50 ಕೋಟಿ ರೂ. ಅನುದಾನ ನೀಡಿದ್ದರು. ಈ ಹಣವನ್ನು ಸಮಾಜದ ಅಭಿವೃದ್ಧಿಗಾಗಿ ಸದ್ಬಳಕೆ ಮಾಡಿಕೊಳ್ಳಲಾಯಿತು. ಕೊರೋನಾ ಸಂದರ್ಭದಲ್ಲೂ ಸಹ 2021 ರಲ್ಲಿ 50 ಕೋಟಿ ರೂ. ಹಾಗೂ ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ. ಬಿಜೆಪಿ ಸರ್ಕಾರ ಅನುದಾನ ನೀಡಿದೆ ಎಂದರು.
ಈ ಅನುದಾನದಲ್ಲಿ ಚರ್ಚ್ ಗಳ ದುರಸ್ತಿ ಹಾಗೂ ಅಭಿವೃದ್ಧಿಗೆ, ಸಮುದಾಯ ಭವನ ನಿರ್ಮಾಣ ಸಂಘ, ಸಂಸ್ಥೆಗಳು ನಡೆಸುವ ವೃದ್ಧಾಶ್ರಮ ಹಾಗೂ ಅನಾಥಾಲಯಗಳಿಗೆ, ಸಮಾಜದ ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು, ಸ್ಮಶಾನಗಳ ಅಭಿವೃದ್ಧಿ ಸೇರಿದಂತೆ ಇತರೆ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದರು.
ಕಳೆದ ಮಾರ್ಚ್ 29 ರಂದು ಸಮಿತಿ ಅಧ್ಯಕ್ಷರನ್ನಾಗಿ ನನ್ನನ್ನು ನೇಮಕ ಮಾಡಿದ್ದು, ಇದಕ್ಕಾಗಿ ರಾಷ್ಟ್ರೀಯ ಮುಖಂಡರಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಹಾಗೂ ಇತರರಿಗೆ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿನ್ಸೆಂಟ್ ರೋಡ್ರಿಗಸ್, ಮೊಹ್ಮದ್ ಶಫೀವುಲ್ಲಾ, ನವೀನ್ ಆಂತೋಣಿ, ಕ್ಲೆಮೆಂಟ್ ರಾಯನ್, ಮಾರ್ಟಿನ್ ವೀನಸ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.