ಮೇ 10 ರ ನಾಳೆ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ‘ಜನಧ್ವನಿ’ ಜಾಥಾ ಹಾಗೂ ಬಹಿರಂಗ ಸಭೆ,ಬಿಜೆಪಿ ಅತ್ಯಂತ ಭ್ರಷ್ಟ ಸರ್ಕಾರ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಕ್ರೋಶ
ಶಿವಮೊಗ್ಗ: ಬಿಜೆಪಿ ಅತ್ಯಂತ ಭ್ರಷ್ಟ ಮತ್ತು ನೀಚ ಸರ್ಕಾರ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಇಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಮೇ 10 ರ ನಾಳೆ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ‘ಜನಧ್ವನಿ’ ಜಾಥಾ ಹಾಗೂ ಬಹಿರಂಗ ಸಭೆ ಏರ್ಪಡಿಸಲಾಗಿದೆ ಎಂದರು.
ಬೆಳಗ್ಗೆ 10.30 ಕ್ಕೆ ಅಶೋಕ ವೃತ್ತದಿಂದ ಹೊರಡುವ ಜಾಥಾ ಬಿ.ಹೆಚ್. ರಸ್ತೆ, ನೆಹರೂ ರಸ್ತೆ, ಗೋಪಿ ವೃತ್ತದ ಮುಖಾಂತರ ಬಾಲರಾಜ ಅರಸ್ ರಸ್ತೆಯಲ್ಲಿರುವ ಭೋವಿ ಸಮುದಾಯ ಭವನ ಬಳಿ ತಲುಪಲಿದೆ. ಅಲ್ಲಿ ಬಹಿರಂಗ ಸಭೆ ನಡೆಯಲಿದ್ದು, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್, ಉಪಾಧ್ಯಕ್ಷ ಪಿ.ವಿ. ಮೋಹನ್, ಪ್ರಧಾನ ಕಾರ್ಯದರ್ಶಿ ಮುರಳೀಧರ್ ಸೇರಿದಂತೆ ಜಿಲ್ಲೆಯ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಶಾಸಕರಾದ ಬಿ.ಕೆ. ಸಂಗಮೇಶ್ವರ್, ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಹೆಚ್.ಎಂ. ಚಂದ್ರಶೇಖರಪ್ಪ, ಬೇಳೂರು ಗೋಪಾಲಕೃಷ್ಣ ಹಾಗೂ ಮುಖಂಡರಾದ ಆರ್.ಎಂ. ಮಂಜುನಾಥ ಗೌಡ ಸೇರಿದಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಜಾಥಾದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ ಎ1 ಆರೋಪಿಯಾಗಿದ್ದರೂ ಸಹ ಅವರನ್ನು ಇದುವರೆಗೂ ಬಂಧಿಸಿಲ್ಲ. ಕೂಡಲೇ ಅವರನ್ನು ಬಂಧಿಸಬೇಕು. ಪಿಎಸ್ಐ ನೇಮಕಾತಿ ಕರ್ಮಕಾಂಡದಲ್ಲಿ ಸಿಐಡಿ ತನಿಖೆಯಲ್ಲಿ ಬಗೆದಷ್ಟು ಹಗರಣಗಳು ಹೊರಬರುತ್ತಿದ್ದು, ಕೇವಲ ಮಧ್ಯವರ್ತಿಗಳನ್ನು ಬಂಧಿಸಿದರೆ ಸಾಲದು, ಹಗರಣದ ರೂವಾರಿಗಳು ವಿಧಾನಸೌಧದಲ್ಲಿಯೇ ಇದ್ದಾರೆ ಎಂದ ಅವರು, ಸಿಐಡಿ ತನಿಖೆ ಬದಲಾಗಿ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು 2500 ಕೋಟಿ ರೂ., ಸಚಿವರಾಗಲು 100 ಕೋಟಿ ರೂ. ಸಿದ್ಧಪಡಿಸಿಕೊಳ್ಳಬೇಕು ಎನ್ನುವ ಮೂಲಕ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಬಣ್ಣವನ್ನೇ ಬಯಲು ಮಾಡಿದ್ದರೂ ಸಹ ಶಿಸ್ತಿನ ಪಕ್ಷವಾಗಿರುವ ಬಿಜೆಪಿ ಇದುವರೆಗೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಸತ್ಯ ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.
ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಹುದ್ದೆಗಳು ಸಿಗದೇ ಉಳ್ಳವರ ಪಾಲಾಗುತ್ತಿದೆ. ಶೇ. 40 ರಷ್ಟು ಕಮಿಷನ್ ನಿಂದಾಗಿ ಕಳಪೆ ಕಾಮಗಾರಿ ನಡೆಯುತ್ತಿದ್ದು, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ಕಾಮಗಾರಿಗಳು ನೀರಲ್ಲಿ ಕೊಚ್ಚಿ ಹೋಗಿವೆ. ಎಲ್ಲಾ ವಿಷಯಗಳಲ್ಲೂ ಬಿಜೆಪಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ರೇಖಾ ರಂಗನಾಥ್, ಮೆಹಖ್ ಷರೀಫ್, ಮುಖಂಡರಾದ ಎಲ್. ರಾಮೇಗೌಡ, ಇಸ್ಮಾಯಿಲ್ ಖಾನ್, ಸಿ.ಹೆಚ್. ಚಂದ್ರಭೂಪಾಲ್, ಎಸ್. ರವಿಕುಮಾರ್, ಚಂದ್ರಶೇಖರ್, ಎಂ. ಚಂದನ್, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
Leave a Comment