ಜಿಲ್ಲಾ ವಕೀಲರ ಸಂಘದ ಸ್ಥಳಾಂತರಕ್ಕೆ ವಿರೋಧ
ಶಿವಮೊಗ್ಗ: ಹಾಲಿ ಕೋಟ್೯ ಕಟ್ಟಡದಲ್ಲಿರುವ ಹಳೆಯ ಜಿಲ್ಲಾ ವಕೀಲರ ಸಂಘವನ್ನು ಅಲ್ಲಿಂದ ಬೇರೆಡ ಸ್ಥಳಾಂತರಿಸುವ ಪ್ರಕ್ರಿಯೆಗೆ ಜಿಲ್ಲಾ ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇಂದು ನಗರದಲ್ಲಿ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಅಶೋಕ ಜಿ.ಭಟ್ಟ ಮತ್ತು ಹಾಲಿ ಅಧ್ಯಕ್ಷರಾದ ಶಿವಮೂರ್ತಿ ಅವರ ನಿಯೋಗ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಿಷಯದ ಕುರಿತು ಮನವಿಯೊಂದನ್ನು ನೀಡತು.
ಯಾವುದೇ ನ್ಯಾಯಾಲಯ ಕಟ್ಟಡ ನಿರ್ಮಿಸುವಾಗ ಕರ್ತವ್ಯ ನಿರತ ವಕೀಲರಿಗೆ ವಿಶ್ರಾಂತಿ, ಅಧ್ಯಯನ, ಕೂತು- ನಿಂತು ಮಾಡಲು, ಕಕ್ಷೀದಾರರ ಜತೆ ಮಾತನಾಡಲು ಅನುಕೂಲವಾಗಲು ಒಂದು ಕೊಠಡಿ ಮೀಸಲಿರಿಸುವ ಪರಿಪಾಠವಿದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಆದರೆ ಈಗ ಜಿಲ್ಲಾ ನ್ಯಾಯಾಧೀಶರ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಗಳು ವಕೀಲರ ಸಂಘವನ್ನು ಕೋರ್ಟ ಕಟ್ಟಡದಿಂದ ಬೇರೆಡೆಗೆ ಸ್ಥಳಾಂತರ ಮಾಡವುವುದನ್ನು ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ತಡೆ ಹಿಡಿಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜನ ಸಂಖ್ಯೆ, ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಈಗಿರುವ ಕೋಟ್೯ ಕಟ್ಟಡ ಜನ ಜಂಗುಳಿಯಿಂದ ತುಂಬಿರುತ್ತದೆ. ಜಾಗ ಇಕ್ಕಟ್ಟಾಗುತ್ತಿದೆ. ಒಂದು ವೇಳೆ ವಕೀಲರ ಸಂಘವನ್ನೇ ಸ್ಥಳಾಂತರ ಮಾಡಬೇಕು ಎಂದಿದ್ದರೆ ನಗರದ ಹೊರ ವಲಯದಲ್ಲಿ 15-20 ಎಕರೆ ಜಾಗ ಗುರುತಿಸಿ ಅಲ್ಲಿ ವಿಶಾಲವಾದ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಿಸಿ ಅದರಲ್ಲಿಯೇ ವಕೀಲರ ಸಂಘಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸಿ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. ವಕೀಲರ ಸಂಘದ ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Leave a Comment