ಸಮಾವೇಶದ ಯಶಸ್ಸಿಗೆ ಸಹಕರಿಸಿದವರೆಲ್ಲರಿಗೂ ಅಭಿನಂದನೆ ಸಲ್ಲಿಸಿದ ಭೋವಿ ಸಮಾಜದ ಅಧ್ಯಕ್ಷ ಎಸ್.ರವಿಕುಮಾರ್‌

ಶಿವಮೊಗ್ಗ : ಏಪ್ರಿಲ್‌ ೨೪ ರಂದು ನಗರದ ಎನ್‌ ಇ ಎಸ್‌ ಮೈದಾನದಲ್ಲಿ ನಡೆದ ಜಿಲ್ಲಾ ಭೋವಿ( ವಡ್ಡರ) ಸಮಾಜದ ಬೃಹತ್‌ ಸಮಾವೇಶ ನಿರೀಕ್ಷೆಯಂತೆ ಯಶಸ್ಸು ಕಂಡಿದೆ. ಈ ಯಶಸ್ಸಿಗೆ ಸಮಾಜದ ಬಂಧುಗಳು ಮಾತ್ರವಲ್ಲದೆ ಮಾಧ್ಯಮದ ಮಿತ್ರರೂ ಕೂಡ ದೊಡ್ಡ ಕೊಡುಗೆ ನೀಡಿದ್ದು, ಅವರೆಲ್ಲರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದು  ಭೋವಿ( ವಡ್ಡರ) ಸಮಾಜದ ಜಿಲ್ಲಾಧ್ಯಕ್ಷ ಎಸ್.‌ ರವಿಕುಮಾರ್‌ ಹೇಳಿದರು. ಸಮಾವೇಶಕ್ಕೆ ದುಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವ ಸಲುವಾಗಿ ಮಂಗಳವಾರ ನಗರದ ಜಿಲ್ಲಾ ಭೋವಿ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಸಮಾಜದ ಹಲವು ಬೇಡಿಕೆಗಳನ್ನಿಟ್ಟುಕೊಂಡು ನಾವು ಸಮಾವೇಶ ನಡೆಸಲು ಉದ್ದೇಶಿಸಿದ್ದೇವು. ಆದರೆ ನಮ್ಮ ಸಮಾಜ ಶೋಷಿತ ಸಮಾಜ. ದೊಡ್ಡ ಮಟ್ಟದ ಸಮಾವೇಶ ನಡೆಸುವಾಗ ಹಣ ಜೋಡಿಸುವುದು ಕಷ್ಟವೇ ಎಂದು ನಾವು ನಂಬಿದ್ದೇವು. ಆದರೆ ಪ್ರತಿಹಳ್ಳಿಯಲ್ಲಿರುವ ನಮ್ಮ ಸಮಾಜದ ಜನರು ತಾವೇ ಮುಂದೆ ಬಂದು ಸಮಾವೇಶಕ್ಕೆ ಧನ ಸಹಾಯ ಮಾಡಿದ ಕಾರಣಕ್ಕೆ ಸಮಾವೇಶ ಅಂದುಕೊಂಡಂತೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು ಎಂದರು. ಸಮಾವೇಶ ಎನ್ನುವುದು ಭೋವಿ ಜನರ ಹಬ್ಬ, ಜಾತ್ರೆ ಎನ್ನುವುದಕ್ಕೆ ಮಾತ್ರ ಸಿಮೀತವಾಗದೆ, ಒಂದು ಜಾಗೃತಿಯ ಸಮಾವೇಶವೂ ಆಗಿ ಗಮನ ಸೆಳೆಯಿತು. ಹಲವು ಬೇಡಿಕೆಗಳಿಗೆ ವೇದಿಕೆಯಲ್ಲಿಯೇ ಗಣ್ಯರು ಸ್ಪಂದನೆ ನೀಡಿದರು. ಅವರ ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ ಎಂದರು.

ವಿಶೇಷವಾಗಿ ಜಿಲ್ಲೆಯ ಸಂಸದರು, ಶಾಸಕರ ಜತೆಗೆ ನಮ್ಮ ಸಮಾಜದ ಅನೇಕ ಮಂದಿ ಗಣ್ಯರು ಸಮಾವೇಶಕ್ಕೆ ಬಂದು ಶುಭ ಹಾರೈಸಿದ್ದು ಮಾತ್ರವಲ್ಲದೆ, ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಮುಂದೆ ಈ ಸಮಾಜ ಜನರು ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಿದೆ ಎಂದರು. ಸಮಾಜದ ಮುಖಂಡರಾದ ಧೀರ್‌ ರಾಜ್‌, ವೀರಭದ್ರಪ್ಪ ಪೂಜಾರ್‌, ಗಣೇಶ್‌, ಚಂದ್ರಪ್ಪ, ರಾಮಕೃಷ್ಣಪ್ಪ, ಹರ್ಷ ಭೋವಿ, ಜಗದೀಶ್‌, ಮಣಿಕಂಠ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.