ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕೆಂಬ ಉದ್ದೇಶದಿಂದ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ : ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ: ಸಚಿವ ಕೆ.ಎಸ್. ಈಶ್ವರಪ್ಪ ಅವರೇನು ಅಪರಾಧ ಮಾಡದೇ ಇದ್ದರೂ, ಅವರ ಮೇಲೆ ಆರೋಪ ಬಂದಿದೆ. ನಿಷ್ಪಕ್ಷಪಾತವಾಗಿ, ತನಿಖೆ ನಡೆಯಬೇಕೆಂಬ ಉದ್ದೇಶದಿಂದ ರಾಜೀನಾಮೆ ನೀಡಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ ಬಿಜೆಪಿ ಕಚೇರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪ ರಾಜೀನಾಮೆ ನೀಡುವ ವಿಚಾರ ಗೊತ್ತಾಗಿದೆ. ಸಚಿವ ಸ್ಥಾನದಲ್ಲಿದ್ದರೆ, ತನಿಖೆಗೆ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡುತ್ತಿದ್ದಾರೆ ಎಂದರು.
ಈ ಪ್ರಕರಣದಲ್ಲಿ ಒತ್ತಡಕ್ಕೆ ಮಣಿದು ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುತ್ತಿದ್ದಾರೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಒತ್ತಡಕ್ಕೆ ಮಣಿದು ರಾಜಿನಾಮೆ ನೀಡುತ್ತಿರುವ ಬಗ್ಗೆ ಅವರೇ ಹೇಳಬೇಕು. ಯಾವುದೇ ಒತ್ತಡವಿಲ್ಲ ಎಂದು ಅವರೇ ಹೇಳಿದ್ದಾರೆ. ನಾನಾಗೇ, ಸ್ವಯಂ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಿರುವುದಾಗಿ ಆರಗ ಜ್ಞಾನೇಂದ್ರ ತಿಳಿಸಿದರು.
ಈಗಾಗಲೇ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ, ತನಿಖೆಯಲ್ಲಿ ಏನು ಬರುತ್ತೊ ನೋಡೋಣ. ಕಾಂಗ್ರೆಸ್ ವಿರೋಧ ಪಕ್ಷವಾಗಿ ಏನು ಮಾತನಾಡುತ್ತಾರೋ ಅದು ಮುಖ್ಯವಲ್ಲ. ಈಗಾಗಲೇ ಸಂತೋಷ್ ಪ್ರಕರಣದಲ್ಲಿ ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸಿದ್ದಾರೆ ಎಂದರು. 
ಸಂತೋಷ್ ನದ್ದು ಯಾವುದೇ ಡೆತ್ ನೋಟ್ ಇಲ್ಲ. ಅವರು ವಾಟ್ಸಾಪ್ ನಲ್ಲಿ ಟೈಪ್ ಮಾಡಿ ಕಳಿಸಿದ್ದಾರಷ್ಟೇ. ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅವರೇ, ಟೈಪ್ ಮಾಡಿದ್ದಾರೋ, ಅಥವಾ ಬೇರೆಯವರು ಟೈಪ್ ಮಾಡಿದ್ದಾರೋ ತಿಳಿಯಬೇಕಿದೆ. ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ. ಉಡುಪಿ ಎಸ್.ಪಿ. ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಿದೆ. ಸದ್ಯದಲ್ಲೇ ವಿವರವಾದ ವರದಿ ಬರಲಿದೆ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಮಹಾನಾಯಕ ಯಾರು ಎಂಬುದರ ಬಗ್ಗೆ ನನಗೇನು ಗೊತ್ತಿಲ್ಲ. ಎಲ್ಲವೂ ಪೊಲೀಸ್ ತನಿಖೆಯಿಂದ ಹೊರಬರಲಿದೆ. ಹಿಂದೆ, ಮುಂದೆ ನೋಡದೇ, ತನಿಖೆ ಮುಂದುವರೆಯಲಿದೆ. ಉಳಿದವರಿಗೆ ಹುಲ್ಲುಕಡ್ಡಿ ಆಧಾರ ಎಂಬುವ ಹಾಗೆ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ಅವರು ರಾಜಕಾರಣ ಮಾಡುತ್ತಿರುವುದು ಜನರಿಗೆ ತಿಳಿಯುತ್ತದೆ. ಪರ್ಸಂಟೇಜ್ ವ್ಯವಹಾರದ ಬಗ್ಗೆ ಸಾಬೀತು ಮಾಡಬೇಕು. ಅವಕಾಶವಿದೆ, ಮೊದಲು ಸಾಬೀತು ಮಾಡಲಿ. ಬಿಜೆಪಿಗೆ ಯಾವುದೇ ಹಿನ್ನಡೆಯಾಗಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.