ಸಾಗರದಲ್ಲಿ ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ. ಪೂರ್ವಗ್ರಹವಿಲ್ಲದ ಪರಿಪೂರ್ಣ ತಿಳಿವಳಿಕೆ ಹೊಂದಿದ್ದ ಅಂಬೇಡ್ಕರ್
ಸಾಗರ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಪೂರ್ವಗ್ರಹವಿಲ್ಲದ ಪರಿಪೂರ್ಣ ತಿಳಿವಳಿಕೆ ಹೊಂದಿದ್ದ ಧೀಮಂತರಾಗಿದ್ದರು ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ತಾಲ್ಲೂಕು ಬಿಜೆಪಿ ಘಟಕ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೋಷಿತ ವರ್ಗದಲ್ಲಿ ಹುಟ್ಟಿದ ಅಂಬೇಡ್ಕರ್ ಅವರು ಪರಿಶ್ರಮದಿಂದ ಜ್ಞಾನಾರ್ಜನೆ ಮಾಡಿ ತಮ್ಮ ಪ್ರತಿಭೆಗೆ ಸಾಣೆ ಹಿಡಿದುಕೊಂಡಿದ್ದರು ಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಅವರು ಶಿಕ್ಷಣ ತಜ್ಞರಾಗಿ, ವಕೀಲರಾಗಿ, ಆರ್ಥಿಕ ತಜ್ಞರಾಗಿ, ಪತ್ರಕರ್ತರಾಗಿ, ಸಮಾಜ ಸೇವಕರಾಗಿ, ಎಲ್ಲಾ ಧರ್ಮಗಳ ಬಗ್ಗೆ ತಿಳಿವಳಿಕೆ ಹೊಂದಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದರು. ನಮಗೆ ಸಂವಿಧಾನವನ್ನ ಕೊಟ್ಟ ಅವರು. ವಿಶ್ವಮಾನವರಾಗಿದ್ದರು ಎಂದು ವಿವರಿಸಿದರು.
ಅಂಬೇಡ್ಕರ್ ಅವರು ಶಿಕ್ಷಣದ ಬಲದಿಂದ ಹಾಗೂ ತಮಗಿದ್ದ ಸಮಾಜಪರ ಕಾಳಜಿಯಿಂದಾಗಿ ಇಡೀ ವಿಶ್ವಕ್ಕೆ ಪ್ರಸ್ತುತವಾದ ವ್ಯಕ್ತಿಯಾಗಿದ್ದರು. ಸದೃಢ ಸಮಾಜ ಕಟ್ಟುವ ನಿಟ್ಟಿನಲ್ಲಿ ನಾವು ನಮ್ಮ ನಮ್ಮ ನಡುವಿನ ಪೈಪೋಟಿಯನ್ನು ಬಿಟ್ಟು ಇಡೀ ಜಗತ್ತಿನೊಂದಿಗೆ ಸ್ಪರ್ಧೆ ಮಾಡಬೇಕು. ಉದ್ಯೋಗದಲ್ಲಿ, ಕೌಶಲದಲ್ಲಿ, ಶಿಕ್ಷಣದಲ್ಲಿ, ಉದ್ಯಮಶೀಲತೆಯಲ್ಲಿ ನಾವು ಸಾಧನೆ ಮಾಡಲು ಈಗ ಬೆಂಗಳೂರಿನಂತಹ ನಗರಕ್ಕೋ ಅಥವಾ ಅಮೆರಿಕದಂತಹ ದೇಶಕ್ಕೋ ಹೋಗಲೇಬೇಕು ಎಂದೇನೂ ಇಲ್ಲ. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಲ್ಲಿದ್ದುಕೊಂಡೇ ಜಗತ್ತಿನ ಗಮನ ಸೆಳೆಯುವಂತಹ ಸಾಧನೆ ಮಾಡಿ ಅಭಿವೃದ್ಧಿ ಹೊಂದಬಹುದು ಎಂದು ಅಶ್ವತ್ಥನಾರಾಯಣ ನುಡಿದರು.
ಶಾಸಕ ಹರತಾಳು ಹಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ್ ಮತ್ತಿತರರು ಇದ್ದರು.
Leave a Comment