ಪರಿಶಿಷ್ಟ ಪಂಗಡದವರಿಗೆ ಈಗಿರುವ ಶೇಕಡ 3 ರಷ್ಟು ಮೀಸಲಾತಿ ಪ್ರಮಾಣವನ್ನು ಶೇ. 7.5 ಕ್ಕೆ ಹೆಚ್ಚಿಸುವಂತೆ ಆಗ್ರಹ
ಶಿವಮೊಗ್ಗ: ಪರಿಶಿಷ್ಟ ಪಂಗಡದವರಿಗೆ ಈಗಿರುವ ಶೇಕಡ 3 ರಷ್ಟು ಮೀಸಲಾತಿ ಪ್ರಮಾಣವನ್ನು ಶೇ. 7.5 ಕ್ಕೆ ಹೆಚ್ಚಿಸಬೇಕೆಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾಧಿಕಾರಿ ಬಿ. ಶಿವಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದು ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕಳೆ 75 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಮೀಸಲಾತಿ ಹೆಚ್ಚಿಸುವುದಾಗಿ ಒಪ್ಪಿಕೊಂಡು ಹೋಗಿದ್ದಾರೆ. 15 ದಿನಗಳ ಒಳಗಾಗಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಈಗ ತಿಂಗಳಾದರೂ ಅವರ ಭರವಸೆ ಹಾಗೆಯೇ ಉಳಿದಿದೆ ಎಂದರು.
ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಇಡೀ ರಾಜ್ಯಾದ್ಯಂತ ಜಾಗೃತಿ ಮೂಡಿಸಲು ಸಂಚಾರ ಮಾಡುತ್ತಿದೆ. ಆ ಮೂಲಕ ಸರ್ಕಾರಕ್ಕೆ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಪಡಿಸುತ್ತಿದ್ದೇವೆ. ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಬೇಡಿಕೆ ನ್ಯಾಯ ಸಮ್ಮತವಾಗಿರುವುದರಿಂದ ನಿವೃತ್ತ ನ್ಯಾ. ಹೆಚ್.ಎನ್. ನಾಗಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗದ ವರದಿಯನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಶೇ. 3 ರ ಮೀಸಲಾತಿಯು 1958 ರಲ್ಲಿ ನಿಗದಿಯಾಗಿದೆ. ಆದರೆ, ಇಂದು ಜನಸಂಖ್ಯೆ ಹೆಚ್ಚಿದೆ. ಉಪ ಪಂಗಡಗಳು ಕೂಡ ಪರಿಶಿಷ್ಟ ವರ್ಗಕ್ಕೆ ಸೇರಿಕೊಂಡಿವೆ. ಶೇ. 3 ರ ಮೀಸಲಾತಿ ಪ್ರಮಾಣವನ್ನು ಎಂದೋ ಹೆಚ್ಚಿಸಬೇಕಿತ್ತು ಆದರೆ, ಇವತ್ತಿನವರೆಗೂ ಅಷ್ಟೇ ಇದೆ. ಇದರಿಂದ ನಮ್ಮ ಜನಾಂಗದ ವಿದ್ಯಾರ್ಥಿ ವರ್ಗ ಹಾಗೂ ನಿರುದ್ಯೋಗಿಗಳಿಗೆ ಅನೇಕ ವರ್ಷಗಳಿಂದ ಬಹುದೊಡ್ಡ ಅನ್ಯಾಯವಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರಿಯಾ ಸಮಿತಿ ಪ್ರಮುಖರಾದ ಮೃತ್ಯುಂಜಯ ಕೆ.ಎಸ್., ಬಸವರಾಜಪ್ಪ, ಹೆಚ್.ಆರ್. ಹನುಮಂತಪ್ಪ, ಮಲ್ಲೇಶಪ್ಪ, ಸಂದೇಶ್, ಸತೀಶ್, ಲಕ್ಷ್ಮಣ್ ಮೊದಲಾದವರಿದ್ದರು.
Leave a Comment