ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆಗ್ರಹಿಸಿ, ಜೆ.ಡಿ.ಎಸ್.ನಿಂದ ಜನತಾ ಜಲಧಾರೆ ರಥಯಾತ್ರೆ ಏ. 21

ಶಿವಮೊಗ್ಗ: ರಾಜ್ಯದ ಜನರಿಗೆ ಕುಡಿಯುವ ನೀರೊದಗಿಸಲು ಹಾಗೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆಗ್ರಹಿಸಿ ಜೆ.ಡಿ.ಎಸ್.ನಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಯಾತ್ರೆ ಏ. 21 ಕ್ಕೆ ಜಿಲ್ಲೆಗೆ ಆಗಮಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಶ್ರೀಕಾಂತ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಭಾಗವಾಗಿ ಪ್ರಮುಖ ನದಿಗಳಿಂದ ಜಲ ಸಂಗ್ರಹಿಸುವ 15 ಗಂಗಾ ರಥಗಳಿಗೆ ಮಂಗಳವಾರವಷ್ಟೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಸಿರು ನಿಶಾನೆ ತೋರಿದ್ದಾರೆ ಎಂದರು.
ಈ 15 ರಥಗಳು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುತ್ತಿವೆ. ಅದರಲ್ಲಿ ಒಂದು ರಥ ಜಿಲ್ಲೆಗೆ ಆಗಮಿಸುತ್ತಿದೆ. ಏ. 21 ರಂದು ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯಿಂದ ಈ ರಥ ಹೊರಡಲಿದೆ. ತೀರ್ಥಹಳ್ಳಿಗೆ ಬಂದು  ಅಲ್ಲೊಂದು ಸಭೆ ನಡೆಸಲಾಗುತ್ತದೆ. ನಂತರ ಅಲ್ಲಿಂದ ಗಾಜನೂರು ಮೂಲಕ ಶಿವಮೊಗ್ಗಕ್ಕೆ ಬರಲಿದೆ ಎಂದರು.
ಶಿವಮೊಗ್ಗದಲ್ಲಿಯು ಸಭೆ ನಡೆಸಲಾಗುತ್ತದೆ. ಬಳಿಕ ಶಿವಮೊಗ್ಗದಿಂದ ಕೂಡ್ಲಿಗೆ ತೆರಳಿ ಅಲ್ಲಿ ರಥವನ್ನು ನಿಲ್ಲಿಸಲಾಗುತ್ತದೆ. ನಂತರ ಏಪ್ರಿಲ್ 22 ರಂದು ಕೂಡ್ಲಿಯಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಿ.ಆರ್.ಪಿ. ಮೂಲಕ ಯಾತ್ರೆ ಮುಂದುವರಿಯಲಿದ್ದು,  ರಥ ಆಲ್ಲಿ ವಾಸ್ತವ್ಯ ಮಾಡಲಿದೆ. ಮಾರ್ಚ್ 23 ರಂದು, ಶಾರದಾ ಅಪ್ಪಾಜಿಗೌಡ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅದರಲ್ಲಿ ಭದ್ರಾವತಿ ತಾಲ್ಲೂಕಿನ ಜನತೆ ಪಾಲ್ಗೊಳ್ಳಲಿದ್ದಾರೆ ಎಂದರು. 
ಶಾರದಾ ಅಪ್ಪಾಜಿಗೌಡ ಮಾತನಾಡಿ, ಪಕ್ಷದ ವರಿಷ್ಠರ ಸೂಚನೆಯಂತೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಜಲಧಾರೆ ಯಾತ್ರೆ ಸಮಾವೇಶ ಅದ್ದೂರಿಯಾಗಿ ನಡೆಸಲಾಗುವುದು ಎಂದು ಹೇಳಿದರು.
ಜೆಡಿಎಸ್ ಮುಖಂಡರಾದ ಕೆ.ಎನ್. ರಾಮಕೃಷ್ಣ, ಗೀತಾ, ಕಾಂತರಾಜ್, ಭಾಸ್ಕರ್, ತ್ಯಾಗರಾಜ್, ಸತ್ಯನಾರಾಯಣ, ನಾಗರಾಜ್ ಕಂಕಾರಿ, ಸಿದ್ದಪ್ಪ ಉಮೇಶ್ ಮೊದಲಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.