ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಕ್ರಮವನ್ನು ಖಂಡಿಸಿ ಏ.11ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ
ಶಿವಮೊಗ್ಗ: ಬಿಸಿಯೂಟ ನೌಕರರನ್ನು 60 ವರ್ಷ ವಯೋಮಾನದ ನೆಪವೊಡ್ಡಿ 19 ವರ್ಷ ಸೇವೆಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮವನ್ನು ಖಂಡಿಸಿ ಏ.11ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಹನುಮಮ್ಮ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆಯು ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಮಕ್ಕಳ ಗೈರುಹಾಜರಿ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಅಡುಗೆಯವರನ್ನು 60 ವರ್ಷ ವಯೋಮಾನದ ನೆಪವೊಡ್ಡಿ 19 ವರ್ಷ ಸೇವೆಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮವನ್ನು ಖಂಡಿಸಿದರು.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಮತ್ತು ಉತ್ತಮ ಫಲಿತಾಂಶ ಹೊರಹೊಮ್ಮಲು ಈ ತಾಯಂದಿರರು ತಮ್ಮ ಜೀವ ಸವೆಸಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಬಡ, ರೈತ, ಕೃಷಿಕೂಲಿಕಾರರ, ದೀನದಲಿತ ಮಕ್ಕಳಿಗೆ ದಿನನಿತ್ಯ ಬಿಸಿ ಆಹಾರ ಬೇಯಿಸಿ ಬಡಿಸುವುದರೊಟ್ಟಿಗೆ' ಆ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯ್ತನದ ಪರಿಶ್ರಮವಿದೆ ಎಂದರು.
2001-02 ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ವಿಧ್ಯಾಭ್ಯಾಸ ಮತ್ತು ವಯಸ್ಸಿನ ಅರ್ಹತೆ ಮಾತ್ರ ನಿಗದಿಮಾಡಲಾಗಿತ್ತು ಅದರಲ್ಲಿ ನಿವೃತ್ತಿ ವಯಸ್ಸನ್ನು ಸರ್ಕಾರದ ಕೈಪಿಡಿಯಲ್ಲಿ ನಿಗದಿಪಡಿಸಿರುವುದಿಲ್ಲ. ಸಂಘವು 2016 ರಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡರೂ ಇದರ ಬಗ್ಗೆ ಸರ್ಕಾರವಾಗಲಿ, ಶಿಕ್ಷಣ ಇಲಾಖೆಯಾಗಲಿ ಹೆಚ್ಚಿನ ಮುತುವರ್ಜಿ ವಹಿಸಲಿಲ್ಲ ಎಂದು ಆರೋಪಿಸಿದರು.
ಸರ್ಕಾರ ನಿವೃತ್ತಿ ವೇತನ ನಿಗದಿ ಮಾಡುವವರೆಗೆ ಈ ತಕ್ಷಣದಲ್ಲಿ ಬಿಡುಗಡೆ ಮಾಡುವ ಬಿಸಿಯೂಟ ನೌಕರರಿಗೆ ಇಡಿಗಂಟು ರೂ. 1,00,000 ಪರಿಹಾರ ನೀಡಬೇಕು. ಮಾರ್ಚ್ 31, 2022 ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ - ಸುತ್ತೋಲೆಯನ್ನು ಬದಲಾಯಿಸಿ ಎಪ್ರೀಲ್ 10, 2022 ಕ್ಕೆ ಮರುಆದೇಶ ನೀಡಬೇಕು. ಮಾರ್ಚ್ ತಿಂಗಳ ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿದ ರೂ. 1000 ವೇತನವನ್ನು ಜನವರಿ 2022 ರಿಂದ ಅನ್ವಯಿಸಿ ಜಾರಿಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಏ.11ರಂದು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಹಾಗೂ ಸರ್ಕಾರ ಒಪ್ಪದಿದ್ದರೆ ಏ.18ರಿಂದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾರಾಯಣ, ತಾರಾ, ಟಿ.ಭಾಗ್ಯಮ್ಮ, ಜಯ್ಯಮ್ಮ, ಆಶಾ, ಸುನೀತಾ ಇನ್ನಿತರರು ಉಪಸ್ಥಿತರಿದ್ದರು.

Leave a Comment