ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಜನಗಣತಿ ಸಮೀಕ್ಷೆ ವರದಿಯನ್ನು ಸರ್ಕಾರ ಸ್ವೀಕರಿಸಿ ಜಿಪಂ ತಾಪಂ ಚುನಾವಣೆಗೆ ತಯಾರಿ ನಡೆಸಬೇಕು ; ಜಂಟಿ ಸುದ್ದಿ ಗೋಷ್ಟಿ

ಶಿವಮೊಗ್ಗ: ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಜನಗಣತಿ ಸಮೀಕ್ಷೆ ವರದಿಯನ್ನು ಸರ್ಕಾರ ಸ್ವೀಕರಿಸಿ ಜಿಪಂ ತಾಪಂ ಚುನಾವಣೆಗೆ ತಯಾರಿ ನಡೆಸಬೇಕು ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ  ಸಂಚಾಲಕ ಆರ್.ಕೆ. ಸಿದ್ಧರಾಮಣ್ಣ, ಜಿಲ್ಲಾಧ್ಯಕ್ಷ ವಿ. ರಾಜು ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಭಾರತದ ಸಂವಿಧಾನ 1992 ಡಿಸೆಂಬರ್ ನಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಮಾಡಿ, ಸಮಾಜದ ದುರ್ಬಲ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಬೇಕೆಂದು ಹೇಳಿದೆ. ಸರ್ಕಾರ ಕೂಡಲೇ ಸರ್ವೋಚ್ಚ ನ್ಯಾಯಾಲಯದ 2010 ರ ಆದೇಶದಂತೆ ಮೀಸಲಾತಿ ಅನ್ವಯವೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಶೇಕಡ 27ರಷ್ಟು ಸ್ಥಾನಗಳನ್ನು ಮೀಸಲಿಡುವ ಕಾನೂನು ದೇಶದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದು ಮೀಸಲಾತಿ ನೀಡುತ್ತಿದೆ ಎಂದರು.
ಈಗ ಸುಪ್ರೀಂ ಕೋರ್ಟ್ ನಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ನಡೆಯುತ್ತಿದೆ. ಸರ್ಕಾರ ಕೇಳಿದ ಹಲವು ಪ್ರಶ್ನೆಗಳಿಗೆ ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ ಜನಗಣತಿ ಸಮೀಕ್ಷೆ ಉತ್ತರ ನೀಡಲಿದೆ. ಹಾಗಾಗಿ ಸರ್ಕಾರ ಕೂಡಲೇ ಈಗಾಗಲೇ ಸಿದ್ಧವಾಗಿರುವ ವೈಜ್ಞಾನಿಕ ಮಾಹಿತಿಯನ್ನು ಒಳಗೊಂಡಿರುವ ಜನಗಣತಿ ಸಮೀಕ್ಷೆಯನ್ನು ಸ್ವೀಕರಿಸಿ ನ್ಯಾಯಾಲಯಕ್ಕೆ ಒದಗಿಸಿ, ಸಾಮಾಜಿಕ ನ್ಯಾಯ, ರಾಜಕೀಯ ನ್ಯಾಯ ಒದಗಿಸಬೇಕು. ಸರ್ವರಿಗೂ ಸಮಬಾಳು ಸಮಪಾಲು ನೀಡುವ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.
ಇದಕ್ಕೆ ಸಂಬಂಧಿಸಿದಂತೆ ಒಕ್ಕೂಟ ಸದ್ಯದಲ್ಲಿಯೇ ಮುಖ್ಯಮಂತ್ರಿಗಳ ಬಳಿ ನಿಯೋಗವನ್ನು ಕರೆದುಕೊಂಡು ಹೋಗಿ ಸಂಬಂಧಪಟ್ಟ ಸಚಿವರು ಹಾಗೂ ಜನಪ್ರತಿನಿಧಿಗಳನ್ನು ಅಧಿಕೃತವಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಮತ್ತು ಕಾಲಕಾಲಕ್ಕೆ ನಡೆಯುವ ತಾಪಂ, ಜಿಪಂ ಚುನಾವಣೆಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 
ಸಂವಿಧಾನದ ಆಶಯದಂತೆ ಶೈಕ್ಷಣಿಕ ಹಾಗೂ ಸಾಮಾಜಿಕ ಮೀಸಲಾತಿಯ ಜೊತೆಗೆ ರಾಜಕೀಯ ಮೀಸಲಾತಿಯೂ ಹಿಂದುಳಿದ ವರ್ಗಗಳಿಗೆ ಸಿಗಬೇಕು. ಮೀಸಲಾತಿ ಬಗ್ಗೆ ಯಾವುದೇ ಭೀತಿ ಬೇಡ. ಮೀಸಲಾತಿ ಇಲ್ಲದೆ ಸಾಮಾಜಿಕ ಸಮಾನತೆ ಕಾಣಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಹಿಂದುಳಿದ ಜಾತಿಗಳಿವೆ. ಆ ಬಗ್ಗೆ ಸಂಪೂರ್ಣ ವಿವರ ಜನಗಣತಿಯಲ್ಲಿ ಇದೆ. ಆದ್ದರಿಂದ ಸಾಮಾಜಿಕ, ಶೈಕ್ಷಣಿಕ ವರದಿ ಅವಶ್ಯಕ ವಿದ್ದು, ಸರ್ಕಾರ ಈ ಬಗ್ಗೆ ತಕ್ಷಣವೇ ಸ್ವೀಕಾರ ಮಾಡಿ ಸುಪ್ರೀಂಕೋರ್ಟ್ಗೆ ಸಲ್ಲಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳಾದ ಎಸ್.ಬಿ. ಅಶೋಕ್ ಕುಮಾರ್, ಕಲಗೋಡು ರತ್ನಾಕರ್, ಜಿ.ಡಿ. ಮಂಜುನಾಥ್, ಎಸ್.ವಿ. ರಾಜಮ್ಮ, ರಾಜೇಶ್, ಸುಮಿತ್ರ ರಂಗನಾಥ್, ಚಂದ್ರಶೇಖರ್ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.