ಎಲ್ಲರೂ ಒಂದು ಎಂಬ ಭಾವನೆಯನ್ನು ರೂಪಿಸುವಂತಹ ಶಿಕ್ಷಣ ಅಗತ್ಯವಿದೆ: ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕೆಳದಿ ಗುಂಡಾ ಜೋಯ್ಸ್
ಶಿವಮೊಗ್ಗ: ಧರ್ಮದ ಚೌಕಟ್ಟು ಮನೆಯಲ್ಲಿ ಇಟ್ಟುಕೊಂಡು ಮನೆಯಿಂದ ಹೊರಗೆ ಎಲ್ಲರೂ ಒಂದು ಎಂಬ ಭಾವನೆಯನ್ನು ರೂಪಿಸುವಂತಹ ಶಿಕ್ಷಣ ಅಗತ್ಯವಿದೆ ಎಂದು 16 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕೆಳದಿ ಗುಂಡಾ ಜೋಯ್ಸ್ ಹೇಳಿದರು.
ಅವರು ಇಂದು ಗೋಪಿಶೆಟ್ಟಿ ಕೊಪ್ಪದ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕಸಾಪದ ವತಿಯಿಂದ ಆಯೋಜಿಸಿದ್ದ 16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಇಂದು ಶಿಕ್ಷಣದಲ್ಲಿ ಹಿಂದಿನಂತೆ ನೀತಿ ಪಾಠದ ಅಗತ್ಯ ಬಹಳ ಕಾಣುತ್ತಿದೆ. ನಮ್ಮ ಸಂವಿಧಾನದಡಿಯಲ್ಲಿ ಸಿಗುವ ನ್ಯಾಯ ತೀರ್ಮಾನಕ್ಕೂ ಬೆಲೆ ಸಿಗದಂತಹ ಪರಿಸ್ಥಿತಿ ದೇಶಕ್ಕೇ ಆದ ಅವಮಾನ ಎಂಬುದನ್ನು ಮನಗಾಣಬೇಕಿದೆ. ಧರ್ಮದ ಚೌಕಟ್ಟು ಮನೆಯಲ್ಲಿ ಇಟ್ಟುಕೊಂಡು ಮನೆಯಿಂದ ಹೊರಗೆ ಎಲ್ಲರೂ ಒಂದು ಎಂಬ ಭಾವನೆಯನ್ನು ರೂಪಿಸುವಂತಹ ಶಿಕ್ಷಣ ಅಗತ್ಯವಿದೆ. ಸಮುದಾಯವೊಂದನ್ನು ಓಲೈಸುವ ಪರಿಪಾಠದಿಂದ ಹೊರಬಂದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದಂತಹ ಮತ್ತು ನಮ್ಮ ನಾಡು, ನುಡಿ, ಭಾಷೆಯನ್ನು ಪರಿಚಯಿಸುವ, ಪ್ರೀತಿಸುವಂತಹ ಶಿಕ್ಷಣ ದೊರೆಯುವಂತಾಗಬೇಕಿದೆ ಎಂದು ಹೇಳಿದರು.
ಕೆಳದಿ ರಾಣಿ ಚೆನ್ನಮ್ಮಾಜಿ ಆಡಳಿತಕ್ಕೆ ಬಂದು 350 ವರ್ಷ ಆಗುತ್ತಿರುವ ಈ ಸಂದರ್ಭದಲ್ಲಿ ಅವರ ಹೆಸರಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕೆಳದಿ ರಾಣಿ ಚೆನ್ನಮ್ಮಾಜಿ ಹೆಸರಲ್ಲಿ ಅಧ್ಯಯನ ಪೀಠವೊಂದನ್ನು ಕೆಳದಿ ಸಾಗರ ಮಾರ್ಗ ಮಧ್ಯದಲ್ಲಿ ಸ್ಥಾಪನೆ ಮಾಡಿ ಆ ಮೂಲಕ ಶಿವಮೊಗ್ಗ ಜಿಲ್ಲೆಯ ಸಮಗ್ರ ಅಧ್ಯಯನಕ್ಕೆ ಕ್ರಮ ಕೈಗೊಳ್ಳಬಹುದಾಗಿದೆ. ಆ ಮೂಲಕ ಕನ್ನಡ ಮಹಾರಾಷ್ಟ್ರ ಬಾಂಧವ್ಯದ ಕೊಡುಗೆಯನ್ನು ಮಹಾರಾಷ್ಟ್ರದ ಜನಸಾಮಾನ್ಯರ ಗಮನಕ್ಕೆ ತರಲು ಪ್ರಯತ್ನವಾಗಬೇಕಿದೆ ಎಂದರು.
ಕೇರಳದ ಬೇಕಲ್ ಕೋಟೆಯ ಮುಂಭಾಗದಲ್ಲಿ ಕೆಳದಿ ಶಿವಪ್ಪನಾಯಕನ ಪುತ್ಥಳಿ ಸ್ಥಾಪನೆ, ಮಂಗಳೂರಿನಲ್ಲಿರುವ ಮಿಲಾಗ್ರಿಸ್ ಚರ್ಚಿಗೆ ನೀಡಿದ ಕೆಳದಿ ಚೆನ್ನಮ್ಮಾಜಿಯ ಕುರಿತ ಫಲಕ ಸ್ಥಾಪನೆ. ಅಂತೆಯೇ ಕೌಲೇದುರ್ಗದಲ್ಲಿ ಕೆಳದಿ ಅರಸರ ಕಾಲದ ಮಸೀದಿಗೆ ಫಲಕ, ಬಿದನೂರು, ಇಕ್ಕೇರಿ, ಶಿವಮೊಗ್ಗ ಸಮೀಪದ ಮೇಳಿಗೆಯಲ್ಲಿರುವ ಸೋಮಶೇಖರನಾಯಕನ ಸಮಾಧಿ ರಕ್ಷಣೆ ಇತ್ಯಾದಿಗಳಿಗೆ ಕ್ರಮಕೈಗೊಳ್ಳುವುದು, ರಾಣಿ ಚನ್ನಮ್ಮಾಜಿಯು ತನ್ನ ದತ್ತು ಪುತ್ರನಿಗೆ ಮಾಡಿದ ಉಪದೇಶವನ್ನು ಎಲ್ಲಾ ಶಾಲೆ, ಕಾಲೇಜುಗಳಲ್ಲಿ, ರಾಜ್ಯದ ಎಲ್ಲ ಗ್ರಾಮಪಂಚಾಯತಿಗಳಲ್ಲಿ ಅಳವಡಿಸುವುದು. ದೇಶಾದ್ಯಂತ ಇರುವ ಕೆಳದಿ ಇತಿಹಾಸ ಪಳೆಯುಳಿಕೆ ಸಂರಕ್ಷಣೆ. ಕೆಳದಿ ಮತ್ತು ಸಮಕಾಲೀನ ಇತಿಹಾಸ ಅಧ್ಯಯನಕ್ಕೆ ಕ್ರಮ ಕೈಗೊಳ್ಳುವುದು, ಪಠ್ಯದಲ್ಲಿ ಕೆಳದಿ ಇತಿಹಾಸ ಸೇರಿಸುವುದು ಈ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ ಎಂದರು.
ಜೊತೆಗೆ ಪ್ರವಾಸೋಧ್ಯಮದ ಮೂಲಕ ಜೋಗ ಜಲಪಾತವನ್ನು ವಿಶ್ವ ಶ್ರೇಷ್ಠ ಪ್ರವಾಸಿ ಕೆಂದ್ರವನ್ನಾಗಿಸುವುದು ಮತ್ತು ಇತರೆ ಪ್ರವಾಸಿ ಸ್ಥಳಗಳ ಪರಿಚಯ ಕುರಿತ ಫಲಕ ಅಳವಡಿಕೆ, ಹೊಸಗುಂದ, ನಾಡಕಲಸಿ, ಉಡುಗಣಿ, ಬಳ್ಳಿಗಾವೆಯೇ ಮೊದಲಾದ ಪ್ರದೇಶಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು ಇವುಗಳನ್ನು ಕೈಗೊಳ್ಳಬಹುದಾಗಿದೆ ಎಂದರು.
ಪರಿಸರ ನಾಶ ಹಲವು ಸವಾಲುಗಳನ್ನು ತಂದೊಡ್ಡಿವೆ. ಕಾಡು ಪ್ರಾಣಿಗಳು ನಾಡಿಗೆ ಮುತ್ತಿಗೆ ಹಾಕುತ್ತಿವೆ. ನೀರು ನಾಯಿ ಊರಿನ ಕೆರೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ರಸ್ತೆಯುದ್ಧಕ್ಕೂ ಬಟಾ ಬಯಲು ಪ್ರದೇಶ. ಒಂದೇ ಜಾತಿಯ ನೆಡುತೋಪಿನ ತಾಣಗಳು ಕಾಣಿಸುತ್ತಿವೆ. ಆರು ವರ್ಷಕ್ಕೊಮ್ಮೆ ಅವೂ ಬರಿದಾಗುತ್ತಿವೆ. ಅರಸಾಳು ಉಪ್ಪಿನಕಾಯಿಯಂತಹ ಮಾವಿನ ಮರಗಳು ನಿರ್ನಾಮವಾಗಿವೆ. ಕಳೆದ 50 ವರ್ಷಗಳಲ್ಲಿ ಪರಿಸರದ ಕಣಿವೆ ಕೊಳ್ಳ ಕಾಡುಗಳು ಅದಲು ಬದಲಾಗಿವೆ. ಸಾಕ್ಷರತೆ ಬಂದಿವೆ. ಪದವಿಗಳು ಪರಿಸರ ರಕ್ಷಣೆಯ ಕಾಳಜಿಯಾಗಿ ಕಾಣಿಸುತ್ತಿಲ್ಲ. ನೀರಿಲ್ಲದೆ ನಮ್ಮ ಬದುಕು ಸಾಗದು. ಪರಿಸರ, ಹಸಿರು, ನೀರು ಚೆನ್ನಾಗಿಲ್ಲದಿದ್ದರೆ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ. ಶಾಲೆ, ಪರಿಸರ, ಎಲ್ಲೆಲ್ಲೂ ಹಸಿರೀಕರಣದ ಅಗತ್ಯವಿದೆ. ಇದನ್ನು ಆಗು ಮಾಡಲು ಮುಂದಾಗಬೇಕಿದೆ ಎಂದು ಹೇಳಿದರು.
ಹೌದು, ಮನುಷ್ಯನಿಗೂ ಜಾಗ ಬೇಕು. ರೈತರಿಗೆ ಭೂಮಿ ಬೇಕು. ಪರಿಸರವೂ ಉಳಿಯಬೇಕು. ಈ ತರಹದ ಯೋಚನೆಯನ್ನು ಸರ್ಕಾರಗಳು ಮಾಡಬೇಕು. ಹಲವು ತಜ್ಞರು ಈ ಕುರಿತಾಗಿ ಅನೇಕ ಸಲಹೆಗಳನ್ನು ನೀಡಿದ್ದಾರೆ. ಮಲೆನಾಡಿನ ಭಾಗದಲ್ಲಿ ಅರಣ್ಯ ಬೆಳೆಸುವ ಮತ್ತು ಉಳಿಸುವ ರೈತರಿಗೆ ಆರ್ಥಿಕ ಸಹಾಯ ನೀಡಬೇಕಾದ ತುರ್ತು ಇದೆ. ನೈಸರ್ಗಿಕ ಸೇವೆಗಳಿಗೆ ಬೆಲೆ ಕಟ್ಟುವ ಪರಿಪಾಠ ಪ್ರಾರಂಭವಾಗಬೇಕು ಎಂದರು.
Leave a Comment