*ಒತ್ತಡಮುಕ್ತ ಪರೀಕ್ಷೆಗಾಗಿ ಪ್ರಧಾನಿಯವರಿಂದ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ*
ವಿದ್ಯಾರ್ಥಿಗಳು ಒತ್ತಡಮುಕ್ತವಾಗಿ ಪರೀಕ್ಷೆಯನ್ನು ಎದುರಿಸಲು ಸಹಕಾರಿಯಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 01 ರಂದು ವಿಶ್ವದಾದ್ಯಂತ ಇರುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ‘ಪರೀಕ್ಷಾ ಪೆ ಚರ್ಚಾ’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂವಾದ ನಡೆಸುವರು.
ಇದೊಂದು ಬಹು ನಿರೀಕ್ಷತ ಮತ್ತು ಉಪಯುಕ್ತವಾದ ವಾರ್ಷಿಕ ಕಾರ್ಯಕ್ರಮವಾಗಿದ್ದು, ಪ್ರಧಾನಮಂತ್ರಿಯವರು ಪರೀಕ್ಷೆ ಕುರಿತಾದ ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡುವರು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನರವರು ‘ಪರೀಕ್ಷಾ ಪೆ ಚರ್ಚಾ’ ಎಂಬ ಕಾರ್ಯಕ್ರಮವು ಮಕ್ಕಳು ಒತ್ತಡಮುಕ್ತವಾಗಿ ಪರೀಕ್ಷೆ ಎದುರಿಸಲು ಒಂದು ಉಪಯುಕ್ತ ಕಾರ್ಯಕ್ರಮವಾಗಿದೆ. ಕೋವಿಡ್ 19 ಕಾರಣದಿಂದ ಕಳೆದ ಎರಡು ವರ್ಷಗಳಿಂದ ಆನ್‍ಲೈನ್‍ನಲ್ಲಿ ನಡೆಯುತ್ತಿದ್ದ ಪರೀಕ್ಷೆಗಳು ಆಫ್‍ಲೈನ್‍ಗೆ ಬಂದಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಮುಖ್ಯ ಪಾತ್ರ ವಹಿಸುತ್ತದೆ ಎಂದಿದ್ದಾರೆ.
ದೇಶಾದ್ಯಂತ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈಗಾಗಲೇ ಆಯ್ಕೆಯಾಗಿರುವ ಮಕ್ಕಳು ರಾಜಭವನಕ್ಕೆ ಭೇಟಿ ಕೊಡುವ ಅವಕಾಶವನ್ನು ಪಡೆದಿದ್ದು ಎಲ್ಲಾ ರಾಜ್ಯದ ರಾಜ್ಯಪಾಲರೊಂದಿಗೆ ಕಾರ್ಯಕ್ರಮದಲ್ಲಿ ನೇರವಾಗಿ (ವರ್ಚುವಲ್ ಮೂಲಕ)ಭಾಗವಹಿಸುವರು. ಈ ಕಾರ್ಯಕ್ರಮವು ಪ್ರಪಂಚದಾದ್ಯಂತ ಚದುರಿದ ಭಾರತೀಯರನ್ನು ತಲುಪಲಿದೆ. ಪರೀಕ್ಷಾ ಪೆ ಚರ್ಚಾ ದ 5 ನೇ ಆವೃತ್ತಿಯಾಗಿರುವ ಈ ಕಾರ್ಯಕ್ರಮವು ದೂರದರ್ಶನದಲ್ಲಿ ನೇರಪ್ರಸಾರವಾಗಲಿದೆ. ಡಿಡಿ ನ್ಯೂಸ್, ಡಿಡಿ ಇಂಡಿಯಾ, ಡಿಡಿ ನ್ಯಾಷನಲ್ ಚಾನಲ್‍ಗಳಲ್ಲಿಯೂ ನೇರ ಪ್ರಸಾರವಾಗಲಿದೆ. ಯೂಟ್ಯೂಬ್ ಚಾನಲ್‍ಗಳಾದ ಎಡುಮಿನೋಫಿಂಡಿಯಾ, ನರೇಂದ್ರ ಮೋದಿ, ಪಿಎಂಓ ಇಂಡಿಯಾ, ಪಿಐಬಿ ಇಂಡಿಯಾ ಮೈ ಗಾವ್ ಇಂಡಿಯಾ, ರಾಜ್ಯಸಭಾ ಟಿವಿ, ಸ್ವಯಂ ಪ್ರಭಾ ಚಾನಲ್‍ಗಳಲ್ಲಿ ಸಹ ನೇರ ಪ್ರಸಾರವಾಗಲಿದೆ ಎಂದರು.
‘ಪರೀಕ್ಷಾ ಪೆ ಚರ್ಚಾ’ ಇದು ಎಕ್ಸಾಮ್ ವಾರಿಯರ್ಸ್ ಎಂಬ ಕಾರ್ಯಕ್ರಮದ ಒಂದು ಭಾಗವಾಗಿದ್ದು ದೇಶದ ಯುವಜನತೆಯನ್ನು ಒತ್ತಡಮುಕ್ತರನ್ನಾಗಿಸಲು ಸಹಕಾರಿಯಾಗಿದೆ. ಒಂದೇ ವೇದಿಕೆಯಡಿ ಪಾಲ್ಗೊಳ್ಳುವ ಮಕ್ಕಳು ಮುಕ್ತವಾಗಿ ಪ್ರಶ್ನೆಗಳನ್ನು ಕೇಳುವ ಅವಕಾಶ ಲಭ್ಯವಿದ್ದು ಪ್ರತಿಯೊಬ್ಬ ಮಕ್ಕಳ ವಿಶೇಷತೆ ಮತ್ತು ವೈವಿಧ್ಯತೆಯನ್ನು ಎತ್ತಿ ಹಿಡಿಯಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವರು ತಿಳಿಸಿದ್ದಾರೆ ಎಂದು ತಿಳಿಸಿದರು.
ಕೇಂದ್ರೀಯ ವಿದ್ಯಾಲಯದ ಪ್ರಭಾರ ಪ್ರಾಂಶುಪಾಲರಾದ ಲಿಶಾ ವರ್ಗೀಸ್ ಮಾತನಾಡಿ, ಈ ಕಾರ್ಯಕ್ರಮವು ನವದೆಹಲಿಯ ತಾಲ್ ಕಟೋರಾ ಸ್ಟೇಡಿಯಂನ ಟೌನ್‍ಹಾಲ್‍ನಲ್ಲಿ ಏಪ್ರಿಲ್ 01 ರ ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು ವಿಶ್ವದಾದ್ಯಂತ ಅನೇಕ ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಭಾಗವಹಿಸುವರು. ಈಗಾಗಲೇ ಪ್ರಧಾನಮಂತ್ರಿಯವರಿಗೆ ಪ್ರಶ್ನೆ ಕೇಳುವ ಮಕ್ಕಳ ಪಟ್ಟಿಯನ್ನು ತಯಾರಿಸಲು ಸೃಜನಶೀಲ ಬರವಣೆಗೆ ಎಂಬ ಸ್ಪರ್ಧೆಯನ್ನು ಆಯೋಜಿಸಿ ಇಲ್ಲಿ ಆಯ್ಕೆಯಾದ ಮಕ್ಕಳ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ದೇಶದಾದ್ಯಂತ 15.1 ಲಕ್ಷ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗಹಿಸಿದ್ದರು.
My Gov ಎಂಬ ವೆಬ್‍ಸೈಟ್‍ನಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಶಂಸನಾ ಪತ್ರದ ಜೊತೆಗೆ ಪರೀಕ್ಷಾ ಕಿಟ್ ದೊರಕಲಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ರಚಿಸಿದ ಪರೀಕ್ಷಾಯೋಧರು ಎಂಬ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದ ಅವರು ಕೇಂದ್ರೀಯ ವಿದ್ಯಾಲಯದಿಂದ 10 ನೇ ತರಗತಿಯ ಅಕ್ಷಯ್ ಮತ್ತು ತನುಶ್ರೀ ಇವರು ಪ್ರಧಾನಿಯವರಿಗೆ ಪ್ರಶ್ನೆ ಕೇಳಲು ಆಯ್ಕೆಯಾಗಿದ್ದಾರೆ ಎಂದರು.
Leave a Comment