ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಪ್ರದರ್ಶನಗೊಳ್ಳದಂತೆ ತಡೆಯಬೇಕು: ಶಿವಮೊಗ್ಗ ಪೀಸ್ ಆರ್ಗನೈಸೇಷನ್ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ

,ಶಿವಮೊಗ್ಗ: ಶಾಂತಿ ಭಂಗಗೊಳಿಸುವ ದ್ವೇಷದ ಜ್ವಾಲೆ ಹೊತ್ತಿಸುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಪ್ರದರ್ಶನಗೊಳ್ಳದಂತೆ ತಡೆಯಬೇಕು ಎಂದು ಶಿವಮೊಗ್ಗ ಪೀಸ್ ಆರ್ಗನೈಸೇಷನ್ ಇಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
‘ದಿ ಕಾಶ್ಮೀರ್ ಫೈಲ್’ ಚಲನಚಿತ್ರ ವೀಕ್ಷಿಸಿದ ನಂತರ ಜನಸಾಮಾನ್ಯ ಭಾರತೀಯರ ಹಿಂದೂ ಪಂಡಿತರ ಹತ್ಯೆಯ ಕಿಚ್ಚು ಹೊತ್ತು ಉರಿಯುತ್ತಿದ್ದು, ಸಿನಿಮಾ ನೋಡಿದ ನಂತರ ಭುಗಿಲೆದ್ದ ಜ್ವಾಲೆ ದ್ವೇಷದ ಘೋಷಣೆಗಳು ಕೂಗಿ ಬರುತ್ತಿದೆ. ಚಿತ್ರ ನೋಡಿದ ಹಿಂದೂ ಬಾಂಧವರ ಮನಸ್ಸಿನಲ್ಲಿ ಮುಸ್ಲಿಮರ ಮೇಲೆ ದ್ವೇಷ ಅಸೂಯೆ ಕೊಲೆ ಮಾಡುವಷ್ಟು ಕಿಚ್ಚಿನ ಬೆಂಕಿ ಹೊತ್ತು ಉರಿಯುತ್ತಿದೆ. ಭಾರತದ ಮುಸ್ಲಿಮರ ಧಕ್ಕೆಯುಂಟಾಗಿದ್ದು, ಆಂತರಿಕ ಗೊಂದಲ ಸರಿಪಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
‘ದಿ ಕಾಶ್ಮೀರ್ ಫೈಲ್’ ಚಲನಚಿತ್ರ ಭಾರತದ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರಿಗೆ ರಹಿತ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ಭಾರತೀಯರಾದ ಹಿಂದೂಗಳು ನೋಡಲು ರಾಜಕಾರಣಿಗಳು ಮುಖ್ಯಮಂತ್ರಿಗಳು ಎಂಪಿ ಎಂಎಲ್ಎಗಳು ಪ್ರೋತ್ಸಾಹಿಸುತ್ತಿದ್ದು, ಉಚಿತವಾಗಿ ಪ್ರದರ್ಶನಗಳನ್ನು ಮಾಡುತ್ತಿದ್ದಾರೆ. ಇದು ಕೂಡ ತಪ್ಪು. ಏಕೆಂದರೆ ಭಾರತದ ಶಾಂತಿ ಸೌಹಾರ್ದತೆ ಕಾಪಾಡುವ ಬದಲು ಇದು ಕಿಚ್ಚಿನ ಮನಸ್ಸನ್ನು ಹೆಚ್ಚಿಸುತ್ತದೆ ಎಂದು ದೂರಿದರು.
‘ದಿ ಕಾಶ್ಮೀರ್ ಫೈಲ್’ ಚಲನಚಿತ್ರದಲ್ಲಿ ಪ್ರದರ್ಶಿಸುವ ಇಸ್ಲಾಂ ಧರ್ಮಕ್ಕೂ ಚಿತ್ರದಲ್ಲಿ ನಟಿಸಿರುವ ವೇಷದಾರಿ ಮುಸ್ಲಿಮರಿಗೂ ಸಂಬಂಧವೇ ಇಲ್ಲ. ಚಿತ್ರದಲ್ಲಿ ತೋರಿಸಿರುವ ಕೊಲೆ, ಅತ್ಯಾಚಾರ, ಹಿಂಸೆ, ದ್ವೇಷ, ಅಸೂಯೆ ಅಹಂಕಾರ, ವಿಶ್ವಾಸದ್ರೋಹ, ಕ್ರೂರತೆ, ಧರ್ಮ ಪರಿವರ್ತನೆ ಮಾಡುವಂತೆ ಚಿತ್ರದಲ್ಲಿ ಪ್ರದರ್ಶಿಸಿರುವ ವೇಷದಾರಿ ಪಾತ್ರಗಳು ಕಾಲ್ಪನಿಕವಾಗಿದೆ. ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ನಲ್ಲಿ ಒಂದು ಅಮಾಯಕನನ್ನು ಕೊಂದರೆ ಇಡೀ ಮಾನವ ಕುಲವನ್ನು ಕೊಂದ ಹಾಗೆ ಎಂದಿದೆ.
ಚಿತ್ರದಲ್ಲಿ ತೋರಿಸುವಂತಹ ಪ್ರದರ್ಶಿಸುವಂತಹ ಘಟನೆಗಳು ಪವಿತ್ರ ಇಸ್ಲಾಮಿನಲ್ಲಿ ಎಲ್ಲೂ ನಡೆದಿರುವುದಿಲ್ಲ. ಕೆಲವೊಂದು ವಿಕೃತ ಮನಸ್ಥಿತಿಯ ವ್ಯಕ್ತಿಗಳು ತನ್ನ ರಾಜಕೀಯ ಬೆಳವಣಿಗೆಗಾಗಿ ಮಾನವರ ಮೇಲೆ ಸರ್ವಾಧಿಕಾರ ಆಳ್ವಿಕೆಗಾಗಿ ಇಂತಹ ವಿಕೃತ ಕೃತ್ಯಗಳನ್ನು ಮಾಡಿರುತ್ತಾರೆ. ಚಲನಚಿತ್ರದಲ್ಲಿ ಸ್ಪಷ್ಟವಾಗಿ ಪಾಕಿಸ್ತಾನ ದೇಶ ಇಂತಹ ವಿಕೃತ ಮನಸ್ಥಿತಿಯ ಭಯೋತ್ಪಾದಕರನ್ನು ಹುಟ್ಟುಹಾಕುತ್ತಿರುವುದು ಎಂದು ತೋರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
 ಇಂತಹದೇ ಒಂದು ಘಟನೆ ಮೂರು ವರ್ಷದ ಹಿಂದೆ ಪುಲ್ವಾಮಾ ದಾಳಿಯಲ್ಲಿ ನಮ್ಮ ಸೈನಿಕರನ್ನು ಸಹ ಬಲಿ ತೆಗೆದುಕೊಳ್ಳಲಾಗಿದೆ. ಖಂಡಿತವಾಗಿಯೂ ವೇಷದಾರಿ ಭಯೋತ್ಪಾದಕರು ಇಂತಹ ನೀಚ ಕೃತ್ಯಗಳನ್ನು ಮಾಡಿದ್ದಾರೆ. ಪಾಕಿಸ್ತಾನ ತನ್ನ ರಾಜಕೀಯ ಲಾಭಕ್ಕೆ ಭಯೋತ್ಪಾದಕರನ್ನು ಸೃಷ್ಟಿಸುತ್ತಿದೆ. ವೇಷಧಾರಿ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವಂತಹ ಪಾಪಿ ಪಾಕಿಸ್ತಾನವನ್ನು ದಮನ ಮಾಡುವಂತಹ ಮಂಗಳ ಹಾಡುವಂತಹ ಅತ್ಯಂತ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಇಂತಹ ಚಿತ್ರಗಳನ್ನು ಪ್ರಸಾರವಾಗದಂತೆ ತಡೆದು ನಮ್ಮ ಭಾರತದ ಶಾಂತಿ ಸೌಹಾರ್ದತೆ ಕಾಪಾಡಬೇಕು. ಪ್ರತಿಯೊಬ್ಬ ಭಾರತೀಯರಿಗೆ ನ್ಯಾಯ ಒದಗಿಸಿ ಭಾರತದ ಆಂತರಿಕ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಶಿವಮೊಗ್ಗ ಪೀಸ್ ಆರ್ಗನೈಸೇಶನ್ ನ ಪ್ರಮಖರಾದ ರಿಯಾಜ್ ಅಹಮದ್, ಮೊಮ್ಮದ್ ಜುಬೇರ್, ಸೈಯದ್ ಸೈಫುಲ್ಲಾ, ಸಲೀಮ್ ಅಹಮದ್, ಮೊಹಮದ್ ಹುಸೇನ್, ಅಲ್ತಾಫ್ ಅಹ್ಮದ್, ಸೈಯದ್ ಬಶೀರ್, ಮೊಹಮ್ಮದ್ ಅಯೂಬ್ ಮುಂತಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.