.ಮಾ.27 ರಂದು ಮಧ್ಯಾಹ್ನ ಕಲ್ಲೂರಿನಲ್ಲಿ ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಶಿವಮೊಗ್ಗ: ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರವು ಕಲ್ಲೂರು ಗ್ರಾಮಸ್ಥರ ಸಹಯೋಗದೊಂದಿಗೆ ಮಾ. 27 ರಂದು ಮಧ್ಯಾಹ್ನ 3.30 ಕ್ಕೆ ಕಲ್ಲೂರಿನಲ್ಲಿ ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಸುಮಾರು 22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶಾಂತವೇರಿ ಗೋಪಾಲಗೌಡರ ಹೆಸರಿನ ಸಮುದಾಯ ಭವನ ಉದ್ಘಾಟನೆ ಮತ್ತು ನೂತನ ಅಂಗನವಾಡಿ ಕಟ್ಟಡದ ಉದ್ಘಾಟನೆ ನಡೆಯಲಿದೆ ಎಂದರು. 
ಕಾರ್ಯಕ್ರಮವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸುವರು. ಸಮುದಾಯ ಭವನ ಹಾಗೂ ಅಂಗನವಾಡಿ ಕಟ್ಟಡವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಶಾಂತವೇರಿ ಗೋಪಾಲಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಶಯ ಭಾಷಣ ಮಾಡಲಿದ್ದಾರೆ. ಕಲ್ಲೂರು ಮೇಘರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಗೋಪಾಲಗೌಡರ ಬಗ್ಗೆ ರಿಪ್ಪನ್ ಪೇಟೆ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಪತಿ ಹಳಗುಂದ ವಿಶೇಷ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ವೈ.ಎಸ್.ವಿ. ದತ್ತ, ಬಿ. ಸ್ವಾಮಿರಾವ್, ಹಿರಿಯ ಸಮಾಜವಾದಿ ಪಿ. ಪುಟ್ಟಯ್ಯ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ಹೆದ್ದಾರಿಪುರ ಗ್ರಾಪಂ ಅಧ್ಯಕ್ಷೆ ವನಿತಾ ಗಂಗಾಧರ್ ಉಪಸ್ಥಿತರಿರುವರು ಎಂದು ತಿಳಿಸಿದರು.
ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಸಂಚಾಲಕ ವಾಸಪ್ಪಗೌಡ ಮಾತನಾಡಿ, ಗೋಪಾಲಗೌಡರ ಸ್ಮರಣೆಯನ್ನು ಕಾರ್ಯಕ್ರಮದ ಮೂಲಕ ಮಾಡಲಾಗುವುದು. ಅವರ ರಾಜಕೀಯ, ಸಾಮಾಜಿಕ ಚಿಂತನೆಗಳು ಯಾವಾಗಲೂ ಪ್ರಸ್ತುತವಾಗಿರುತ್ತವೆ. ಇಂತಹ ಆದರ್ಶ ವ್ಯಕ್ತಿಯ ಕಾರ್ಯಕ್ರಮವನ್ನು ಊರಹಬ್ಬವಾಗಿ, ಪಕ್ಷಾತೀತವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೊಳೆಮಡಿಲು ವೆಂಕಟೇಶ್, ಎಸ್.ವಿ. ರಾಜಮ್ಮ, ಸಿ. ಈರಪ್ಪ, ಕೆ.ಎನ್. ಸುರೇಂದ್ರ, ಶಂಕರನಾಯ್ಕ್ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.