ಕುರಿಗಾಹಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ:ಮಾ. 22 ರಂದು ಕುರಿಗಾಹಿಗಳಿಂದ ವಿಧಾನಸೌಧ ಚಲೋ ಚಳವಳಿ

ಶಿವಮೊಗ್ಗ: ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಕುರಿಗಾಹಿ ಮಹಿಳೆ ದಿ. ಲಕ್ಷ್ಮಿ ಕಳ್ಳಿಮನಿ ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಕುರುಬ ಸಮಾಜದ ಸಂಘಟನೆಗಳ ಒಕ್ಕೂಟ ಬೆಂಗಳೂರು ರಾಜ್ಯ ಸಂಚಾಲ ಸಿದ್ದಣ್ಣ ತೇಜಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಕ್ಷ್ಮಿ ಕಳ್ಳಿಮನಿ ಅವರ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಕುರಿಗಾಹಿಗಳ ಮೇಲೆ ರಾಜ್ಯದಲ್ಲಿ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಮಾ. 22 ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಸುಮಾರು 20 ಸಾವಿರಕ್ಕೂ ಅಧಿಕ ಕುರಿಗಾಹಿಗಳಿಂದ ವಿಧಾನಸೌಧ ಚಲೋ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಲಕ್ಷ್ಮಿ ಕಳ್ಳಿಮನಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ರಾಜಕೀಯ ಇದೆ. ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದರೂ ಕೂಡ ಸರ್ಕಾರ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಹೋಗಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ. ರಾಜ್ಯದಲ್ಲಿ ಶಿವಮೊಗ್ಗದಲ್ಲಿ ಹರ್ಷನಿಗೊಂದು ನ್ಯಾಯ, ಕುಂದಗೋಳದಲ್ಲಿ ಲಕ್ಷ್ಮಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.
ಎಲ್ಲಾ ಪಕ್ಷದ ನಾಯಕರು ಈ ಕೊಲೆ ಮತ್ತು ಅತ್ಯಾಚಾರದ ಬಗ್ಗೆ ಮಾತನಾಡಿಲ್ಲ. ಕೆ.ಎಸ್. ಈಶ್ವರಪ್ಪ, ಸಿದ್ಧರಾಮಯ್ಯ ಸೇರಿದಂತೆ ತಮ್ಮ ಸಮಾದ ಮಹಿಳೆಗಾದ ಅನ್ಯಾಯವನ್ನು ಖಂಡಿಸಲಿಲ್ಲ. ಕುರುಬ ಸಮಾಜವನ್ನು ರಾಜಕಾರಣಕ್ಕೆ ಮಾತ್ರ ಬಳಸಿಕೊಳ್ಳುತ್ತಾರೆ. ಆದರೆ, ಇಂತಹ ಘಟನೆಗಳು ನಡೆದಾಗ ಮೂಕಪ್ರೇಕ್ಷಕರಾಗುತ್ತಾರೆ. ಗೃಹಸಚಿವ ಆರಗ ಜ್ಞಾನೇಂದ್ರ ಅವರು ಘಟನೆಯ ತನಿಖೆ ಬಗ್ಗೆ ಮಾತೇ ಎತ್ತಿಲ್ಲ. ಕುರಿಗಾಹಿಗಳಿಗೆ ರಕ್ಷಣೆಯೇ ಇಲ್ಲ. ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕುರಿಗಾಹಿಗಳ ಆತ್ಮರಕ್ಷಣೆಗೆ ಬಂದೂಕು ಪರವಾನಿಗೆ ನೀಡಬೇಕು. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿತಿಂಗಳು ಕುರಿಗಾಹಿಗಳ ಸಭೆ ನಡೆಸಬೇಕು. ಅವರ ಮಕ್ಕಳಿಗೆ ಶಿಕ್ಷಣದಲ್ಲಿ ಪ್ರಾತಿನಿಧ್ಯ ನೀಡಬೇಕು. ಶಾಶ್ವತ ಪರಿಹಾರ ನಿಧಿ ಸ್ಥಾಪಿಸಬೇಕು. ಅನುಗ್ರಹ ಯೋಜನೆ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂಬುದು ಸೇರಿದಂತೆ ಸುಮಾರು 15 ಬೇಡಿಕೆಗಳನ್ನಿಟ್ಟುಕೊಂಡು ಕುರುಬ ಸಮಾಜದ ಸಂಘಟನೆಗಳ ಒಕ್ಕೂಟ ಮಾ. 22 ರಂದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ವಿಧಾನಸೌಧದವರೆಗೂ ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಅಷ್ಟರೊಳಗೆ ಸರ್ಕಾರ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಹೆಚ್.ಕೆ. ದೊಡ್ಡಮನಿ, ಯಲ್ಲಪ್ಪ, ಕುಮಾರ್ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.