ಮಾ. 16 ರಂದುಪುಸ್ತಕಗಳ ಬಿಡುಗಡೆ ಕಾರ್ಯಕ್ರಮ
ಶಿವಮೊಗ್ಗ: ಲೇಖಕ, ಭಾಷಾ ತಜ್ಞ ಪ್ರೊ. ಮೇಟಿ ಮಲ್ಲಿಕಾರ್ಜುನ ಅವರ 4 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಮಾ. 16 ರಂದು ಸಂಜೆ 5.30 ಕ್ಕೆ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಹ್ಯಾದ್ರಿ ಕಲಾ ತಂಡದ ಜಿ.ಆರ್. ಲವ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಹ್ಯಾದ್ರಿ ಕಲಾ ತಂಡ, ರಂಗ ಬೆಳಕು ಇವರ ಸಂಯುಕ್ತಾಶ್ರಯದಲ್ಲಿ ಮೇಟಿ ಮಲ್ಲಿಕಾರ್ಜುನ ಅವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಎರಡು ರಂಗ ತಂಡಗಳು ರಂಗ ಚಳವಳಿಯ ಜೊತೆಗೆ ಸಾಹಿತ್ಯದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ನುಡಿಯರಿಮೆ, ಮಾತು ಮಾತು ಮಥಿಸಿ, ನುಡಿಯ ಒಡಲು, ಇಂಗ್ಲಿಷ್ ಸಂಕಥನ ಎಂಬ ನಾಲ್ಕು ಪುಸ್ತಕಗಳನ್ನು ಬೇರೆ ಬೇರೆ ಪ್ರಕಾಶಕರು ಪ್ರಕಟಿಸಿದ್ದಾರೆ. ಈ ಪುಸ್ತಕಗಳ ಸಾರವನ್ನು ಅರಿವಿನ ನೆಲೆಯನ್ನು ಸಮೂಹಕ್ಕೆ ತಲುಪಿಸಬೇಕು ಎನ್ನುವ ಹಿನ್ನಲೆಯಲ್ಲಿ ಈ ಎರಡೂ ರಂಗ ತಂಡಗಳು ಸೇರಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದು, ಕವಿ ಮತ್ತು ನಾಟಕಕಾರ ಪ್ರೊ. ಹೆಚ್.ಎಸ್. ಶಿವಪ್ರಕಾಶ್ ಪುಸ್ತಕ ಬಿಡುಗಡೆ ಮಾಡುವರು. ನಾಲ್ಕೂ ಪುಸ್ತಕಗಳನ್ನು ಕುರಿತು ಪ್ರೊ. ವೈ.ಕೆ. ನಾರಾಯಣಸ್ವಾಮಿ, ಪ್ರೊ. ಪಿ. ಮಾದೇವಯ್ಯ, ಪ್ರೊ. ಅವಿನಾಶ್ ಟಿ., ಸಹ ಪ್ರಾಧ್ಯಾಪಕ ಬಿ.ಎಲ್. ರಾಜು ಮಾತನಾಡುವರು.
ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲ ಪ್ರೊ.ಕೆ.ಬಿ. ಧನಂಜಯ, ಹಂಪಿ ವಿವಿ ಪ್ರಸರಾಂಗ ನಿರ್ದೇಶಕರಾದ ಪ್ರೊ ಶೈಲಜಾ ಹಿರೇಮಠ ಉಪಸ್ಥಿತರಿದ್ದು, ಕತೆಗಾರ ಪ್ರೊ. ಅಮರೇಶ್ ನುಗಡೋಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪ್ರಾಧ್ಯಾಪಕ ಡಾ. ಪ್ರಕಾಶ್ ಮರ್ಗನಳ್ಳಿ ಮಾತನಾಡಿ, ಮೇಟಿ ಮಲ್ಲಿಕಾರ್ಜುನ ಅವರು ಸಹ್ಯಾದ್ರಿ ಕಾಲೇಜಿನಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಅಧ್ಯಾಪನ, ಅಧ್ಯಯನದ ಮೂಲಕ ವಿದ್ಯಾರ್ಥಿಗಳ ಬೆಳವಣಿಗೆಗೆ ಜೊತೆಯಾಗಿದ್ದಾರೆ. ಭಾಷಾಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆದಿರುವ ಇವರು ನೂರಕ್ಕೂ ಹೆಚ್ಚಿನ ಲೇಖನ ಬರೆದಿದ್ದಾರೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಹಲವು ಕೃತಿಗಳ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಆಗಮಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ರಂಗಬೆಳಕು ತಂಡದ ಟಿ.ಪಿ. ಭಾಸ್ಕರ್ ಇದ್ದರು.
Leave a Comment