ನವೋದಯ ವಿದ್ಯಾಲಯದಲ್ಲಿ 12 ನೇ ತರಗತಿ ಮಕ್ಕಳಿಂದ ಸಣ್ಣ ಮಕ್ಕಳ ಮೇಲೆ ದೌರ್ಜನ್ಯ,ದೈಹಿಕ ಮತ್ತು ಮಾನಸಿಕ ಹಿಂಸೆ: ಪೋಷಕರಿಂದ ಸಂಸದ ಬಿವೈಆರ್ ಗೆ ದೂರು

ಶಿವಮೊಗ್ಗ: ಜಿಲ್ಲೆಯ ಏಕೈಕ ಜವಾಹರಲಾಲ್ ನೆಹರೂ ನವೋದಯ ವಿದ್ಯಾಲಯದಲ್ಲಿ ಹಲವಾರು ಸಮಸ್ಯೆಗಳಿದ್ದು, ಈ ಕೂಡಲೇ ಸಮಸ್ಯೆ ಬಗಹರಿಸುವಂತೆ ಒತ್ತಾಯಿಸಿ ಜೆ.ಎನ್.ವಿ. ವಿದ್ಯಾಲಯದ ವಿದ್ಯಾರ್ಥಿಗಳ ಪೋಷಕರು ಇಂದು ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ. 
ವಿದ್ಯಾಲಯದಲ್ಲಿ 12 ನೇ ತರಗತಿ ಮಕ್ಕಳಿಂದ ಸಣ್ಣ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಬಟ್ಟೆ ತೊಳೆಸುವುದು, ಬೂಟು ಒರೆಸುವುದು, ಹೊಡೆಯುವುದು, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವುದು ಹೀಗೆ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲಾಗುತ್ತಿದೆ. 2015 ರಲ್ಲಿ ಈ ರೀತಿ ಹಿಂಸೆ ಅನುಭವಿಸಲಾಗದೇ 9 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅದನ್ನು ವಿದ್ಯಾಲಯದವರು ಮುಚ್ಚಿ ಹಾಕಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ. 
ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ವಿದ್ಯಾಲಯದ ಪ್ರಾಂಶುಪಾಲರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಲ್ಲದೇ ವಿನಾಕಾರಣ ಮಕ್ಕಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಆಟಿಕೆ ವಸ್ತುಗಳು ತರಬೇಕೆಂದು ಕಾರಣ ಹೇಳಿ ದೈಹಿಕ ಶಿಕ್ಷಕರು ಮತ್ತು ಸೋಷಿಯಲ್ ಶಿಕ್ಷಕರು ಮಕ್ಕಳಿಂದ ಹಣ ವಸೂಲಿ ಮಾಡಿ ಸರ್ಕಾರದಿಂದ ಅನುದಾನ ಬಂದರೂ ಸಹ ಮಕ್ಕಳಿಗೆ ವಂಚನೆ ಮಾಡಿದ್ದಾರೆ ಎಂದರು.
ವಿದ್ಯಾಲಯದಲ್ಲಿ ಶೈಕ್ಷಣಿಕ ಮೌಲ್ಯಯುತ ಶಿಕ್ಷಣದ ಕೊರತೆ ಇದೆ. ಸುಸ್ಥಿರ ಕಟ್ಟಡಗಳಿಲ್ಲದೇ ಹಳೆಯ ಕಟ್ಟಡಗಳು ವಾಸಕ್ಕೆ ಯೋಗ್ಯದಿಲ್ಲದಿರುವುದು ಹಾಗೂ ಕುಡಿಯುವ ನೀರಿನ ಸಮಸ್ಯೆ, ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವುದಿಲ್ಲ. ಮತ್ತು ಶೌಚಾಲಯ ಹಾಗೂ ಸ್ನಾನ ಗೃಹಗಳು ಅವ್ಯವಸ್ಥೆಗಳಿಂದ ಕೂಡಿದ್ದು, ಈ ಎಲ್ಲಾ ಅವ್ಯವಸ್ಥೆಗಳಿಗೆ ಆಡಳಿತ ಮಂಡಳಿಯೇ ಕಾರಣವಾಗಿದ್ದು, ಈ ಬಗ್ಗೆ  ತನಿಖೆ ಮಾಡಿ ಸಂಬಂಧಪಟ್ಟವರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪೋಷಕರು ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.