ಇಂದು ವಿಶ್ವ ಪ್ಯಾಂಗೋಲಿನ್ ದಿನ | 'ಚಿಪ್ಪುಹಂದಿ' ಈಗ ಅಳಿವಿನಂಚಿನ ಸಸ್ತನಿ*
ಕಳೆದ ನವೆಂಬರ್ ತಿಂಗಳಲ್ಲಿ ದಾವಣಗೆರೆಯ ಡಿ.ಸಿ.ಆರ್.ಬಿ (district Crime Record bureau) ಪೋಲೀಸ್ ಘಟಕವು 67.7 ಕೆ.ಜಿ. ಪ್ಯಾಂಗೋಲಿನ್ ಚಿಪ್ಪನ್ನು ವಶಪಡಿಸಿಕೊಂಡು 18 ಜನ ಅಂತರ್ ಜಿಲ್ಲಾ ಚಿಪ್ಪುಹಂದಿ ಕಳ್ಳಸಾಗಣೆದಾರರನ್ನು ಬಂಧಿಸಿ 1972 ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. 2018 ರಲ್ಲಿಯೂ ಕುದುರೆಮುಖ ವನ್ಯಜೀವಿ ವಿಭಾಗದ ಸಿದ್ದಾಪುರ ರೇಂಜಿನ ಅಂದಿನ ಆರ್.ಎಫ್.ಒ ಸವಿತಾ ದೇವಾಡಿಗ ಅವರು ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡೆಯ ಹಲವರನ್ನು ಬಂಧಿಸಿ ನಂತರ ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದರು.
ಸುಮಾರು 67.7 KG ಚಿಪ್ಪುಪಡೆಯಲು 30-40 ವಯಸ್ಕ ಚಿಪ್ಪು ಹಂದಿಗಳನ್ನು ಬೇಟೆಯಾಡಬೇಕು, ಅದರಲ್ಲಿ ಮರಿಗಳ ಚಿಪ್ಪು ಸೇರಿದ್ದರೆ ಕೊಂದ ಸಂಖ್ಯೆ ಇನ್ನೂ ಅಧಿಕ. ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿಪ್ಪು ವಶಪಡಿಸಿಕೊಂಡರೂ ಯಾವುದೇ ದೃಶ್ಯ ಮಾಧ್ಯಮ ಅದನ್ನು ಸುದ್ದಿ ಮಾಡಲ್ಲಿಲ್ಲ, ಅದು ಮಾಧ್ಯಮಗಳ ಟಿಆರ್ ಪಿ ಹೆಚ್ಚಿಸುವಂತಹ ಸುದ್ಧಿ ಅಲ್ಲ ಬಿಡಿ, ಈಗ ಪ್ರಪಂಚದಲ್ಲೇ ಅತೀ ಹೆಚ್ಚು ಕಳ್ಳಸಾಗಣೆಗೆ ಬಲಿಯಾಗಿ ಇನ್ನೇನು ವಂಶ ನಾಶದ ಪಟ್ಟಿ ಸೇರಲು ತವಕಿಸುತ್ತಿರುವ ಚಿಪ್ಪು ಹಂದಿಗಳು ನಮಗೆ ಹಾಗು ನಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಚಿತ್ರದಲ್ಲಿ ಮಾತ್ರ ನೋಡಲು ಲಭ್ಯ !.
ಪ್ಯಾಂಗೋಲಿನ್ ಗೆ ಮಲಯ ಭಾಷೆಯಲ್ಲಿ ಗುಂಡಾಗಿ ಉರುಳು ಎಂಬ ಅರ್ಥವಿದೆ. ಅಪಾಯ ಬಂದಾಗ ಸುತ್ತಿಕೊಂಡು ಚೆಂಡಿನಾಕಾರವಾದರೆ ಯಾವ ಪ್ರಾಣಿಗಳು ಇವಕ್ಕೆ ಹಾನಿ ಮಾಡಲಾರವು, ಇವು ವಿಕಾಸದಲ್ಲಿ ಅಷ್ಟಾಗಿ ಮುಂದುವರಿಯದ ಹಳೆ ಜಗತ್ತಿನ ಬಹು ಪುರಾತನ ಸಸ್ತನಿಗಳು, ಪ್ರಾಚೀನ ಸಸ್ತನಿಗಳ ಲಕ್ಷಣಗಳನ್ನು ಈಗಲೂ ಉಳಿಸಿಕೊಂಡಿವೆ. ಇವುಗಳ ಬಾಯಲ್ಲಿ ಹಲ್ಲುಗಳಿಲ್ಲ, ಕಿವಿಗಳು ವಿಶೇಷವಾಗಿ ಬೆಳೆದಿಲ್ಲ, ಚಿಕ್ಕ ಕಣ್ಣುಗಳು, ನಾಲಿಗೆ ದೇಹಕ್ಕಿಂತ ಉದ್ದವಿದೆ. ಇವುಗಳಲ್ಲಿ ಜಗತ್ತಿನಾದ್ಯಂತ ಒಂದು ಜಾತಿ ಎಂಟು ಪ್ರಬೇಧಗಳಿದ್ದು, ಆಫ್ರಿಕಾ ಹಾಗೂ ಏಷಿಯಾ ಖಂಡಕ್ಕೆ ಮಾತ್ರ ಸೀಮಿತವಾಗಿವೆ. ಇವುಗಳಲ್ಲಿ ಬಹುತೇಕ ಪ್ರಬೇಧಗಳು ಅಳಿವಿನಂಚಿನಲ್ಲಿದ್ದರೆ, ಕೆಲವು ಅಪಾಯದಲ್ಲಿದೆ. ಭಾರತದಲ್ಲಿ ಚೈನೀಸ್ ಪ್ಯಾಂಗೋಲಿನ್ ಹಾಗು ಇಂಡಿಯನ್ ಪ್ಯಾಂಗೋಲಿನ್ ಎಂಬ ಎರಡು ಪ್ರಬೇಧಗಳಿವೆ, ನಮ್ಮ ರಾಜ್ಯದಲ್ಲಿರುವುದು ಇಂಡಿಯನ್ ಪ್ಯಾಂಗೋಲಿನ್.
ಇವುಗಳ ಮುಖ್ಯ ಆಹಾರ ಇರುವೆ, ಗೆದ್ದಲು, ಹುಳುಗಳು ಹಾಗು ಕೆಲವು ಜಾತಿ ಕೀಟಗಳು ತನ್ನ ಮುಂದಿನ ಕಾಲಿನ ಮೊನಚು ಉಗುರುಗಳಿಂದ ಇರುವೆ ಗೂಡು, ಗೆದ್ದಲು ಹುತ್ತಗಳನ್ನು ಒಡೆದು ತನ್ನ ಉದ್ದನೆಯ ಅಂಟಿನಂತಹ ಜಿಗುಟು ನಾಲಿಗೆ ಹೊರಚಾಚಿ ಇರುವೆ ಗೆದ್ದಲುಗಳನ್ನು ನೆಕ್ಕಿ ನುಂಗುತ್ತವೆ, ದಿನಕ್ಕೆ ಲಕ್ಷಾಂತರ ಇರುವೆ, ಗೆದ್ದಲುಗಳನ್ನು ಭಕ್ಷಿಸುತ್ತವೆ, ತನ್ನ ಜೀವಿತಾವಧಿಯಲ್ಲಿ ಸುಮಾರು 70 ಮಿಲಿಯನ್ ಕೀಟಗಳನ್ನು ಭಕ್ಷಿಸುತ್ತದೆ.
ಇತ್ತೀಚಿಗೆ ಪ್ಯಾಂಗೋಲಿನ್ ಸಂಖ್ಯೆ ಗಣನೀಯವಾಗಿ ಕುಸಿದಂತೆ, ಮಲೆನಾಡಿನ ಕೆಲವು ಭಾಗಗಳಲ್ಲಿ ಕೆಲವು ಜಾತಿ ಇರುವೆ ಹಾಗೂ ಕೀಟಗಳ ಸಂತತಿ ವಿಪರೀತ ಹೆಚ್ಚಿದೆ, ಕಾಡಲ್ಲಿ ಯಾವುದೇ ಮರದ ಬುಡವನ್ನು ಬಿಡದೆ ಮರದ ಸುತ್ತಲೂ ಗುಂಡಿ ಹೊಡೆದು ಮಣ್ಣನ್ನು ಹೊರಹಾಕಿ ದಿಬ್ಬಗಳನ್ನು ರಚಿಸಿದ ಇರುವೆ ಗೂಡುಗಳ ದೃಶ್ಯ ಕೆಲವು ಕಡೆ ಸಾಮಾನ್ಯ. ಮೊದ ಮೊದಲು ಕಾಡು ಹಾಗು ಕೃಷಿ ಜಮೀನಿನಲ್ಲಿ ವಿರಳವಾಗಿ ಕಾಣುತ್ತಿದ್ದ ಇವು ತಮ್ಮ ಸಂಖ್ಯೆ ಹೆಚ್ಚಿಸಿಕೊಂಡು ಹೊಲದಲ್ಲಿ ಬೆಳಸಿದ ಮರಗಳ ಸುತ್ತ ಗೂಡು ರಚಿಸುತ್ತಿವೆ, ಅಡಿಕೆ ಮರಗಳಿಗಂತೂ ಮಳೆಗಾಲದಲ್ಲಿ ಮೀಟಿ ಬೀಳುತ್ತಿವೆ, ಇಲ್ಲಿಗೆ ನಿಲ್ಲುತ್ತಿಲ್ಲ ಇವುಗಳ ಹಾವಳಿ ಮನೆಗಳಿಗೆ ನುಗ್ಗುತ್ತಿರುವ ಇವು ಅಡುಗೆ, ಎಣ್ಣೆ ಪದಾರ್ಥ, ಒಡೆದ ತೆಂಗಿನಕಾಯಿಗೆ ಮುಗಿ ಬೀಳುತ್ತಿವೆ. ತೇವಾಂಶ ಹೆಚ್ಚಿರುವ ಪ್ರದೇಶಗಲ್ಲಿ ಇವುಗಳ ಸಂಖ್ಯೆ ಕಡಿಮೆ.
ಮಲೆನಾಡಲ್ಲಿ ಪುಳ್ಳಿರುವೆ, ಟೆಂಕ್ ಬಾವ, ಸೊಂಟ ಮುರುಕ ಎಂದೆಲ್ಲ ಕರೆವ ಈ ಇರುವೆಯ ಆಂಗ್ಲ ನಾಮ Short-legged Hunchback ant ಹತ್ತಿಪ್ಪತ್ತು ವರ್ಷಗಳ ಹಿಂದೆ ಕಾಡಲ್ಲಿ ವಿರಳವಾಗಿ ಕಾಣುತ್ತಿದ್ದ ಇವು ಈಗ ಕಾಡಲ್ಲಿ ವಿಪರೀತ ಹೆಚ್ಚಾಗಿ ಜೊತೆಗೆ ಗದ್ದೆ ತೋಟ ಹೊಲಗಳನ್ನು ಆಕ್ರಮಿಸಿವೆ.
ಪ್ರಕೃತಿಯಲ್ಲಿ ಯಾವುದೇ ಜೀವಿಗಳ ಸಂಖ್ಯೆ ಮಿತಿ ಮೀರದಂತೆ ಅವುಗಳನ್ನು ನಿಯಂತ್ರಿಸಲು ಮತ್ತೊಂದು ಪರಭಕ್ಷಕ ಜೀವಿ ಇರುತ್ತದೆ, ಇದು ಜೀವ ವೈವಿಧ್ಯತೆ ಸಮತೋಲನದಲ್ಲಿ ಇರಲು ಬಹು ಅವಶ್ಯ, ಇರುವೆಗಳನ್ನು ಭಕ್ಷಿಸಬಲ್ಲ ಚಿಪ್ಪುಹಂದಿಗಳು ಇರುವೆ / ಗೆದ್ದಲು ಗೂಡುಗಳನ್ನು ಆಳದವರೆಗೂ ಅಗೆದು ಮೊಟ್ಟೆ, ಲಾರ್ವ, ರಾಣಿಹುಳುಗಳನ್ನು ತಿನ್ನುತ್ತಿತ್ತು, ದಿನಕ್ಕೆ ಲಕ್ಷ ಲಕ್ಷ ಇರುವೆ, ಗೆದ್ದಲುಗಳನ್ನು ತಿಂದು ಅವುಗಳ ಸಂತತಿ ನಿಯಂತ್ರಣದಲ್ಲಿ ಇಡುತ್ತಿದ್ದವು. ಮನುಷ್ಯನ ಧನ ದಾಹಕ್ಕೆ ಚಿಪ್ಪು ಹಂದಿಗಳು ಬಲಿಯಾಗುತ್ತಿದ್ದಂತೆ, ಕೆಲ ಜಾತಿ ಇರುವೆಗಳ ಸಂತತಿ ವಿಪರೀತ ಹೆಚ್ಚತೊಡಗಿದೆ.
ಇರುವೆಗಳು ಯಾವುದೇ ರೋಗ ಹರಡದಿದ್ದರೂ ಚರಂಡಿ, ಕಸದ ತೊಟ್ಟಿ ಮಲಮೂತ್ರಗಳ ಮೇಲೆ ಸಂಚರಿಸುವುದರಿಂದ ಕೆಲವು ರೋಗಕಾರಕ ವೈರಸ್ ಬ್ಯಾಕ್ಟೀರಿಯಾಗಳನ್ನು ಹೊತ್ತು ತರಬಲ್ಲವು, ಆಹಾರದ ಇಟ್ಟ ಪಾತ್ರೆಗಳಲ್ಲಿ ಒಂದೆರಡು ಇರುವೆಗಳಿದ್ದರೆ ಅವನ್ನು ಓಡಿಸಿ ಹಾಗೆಯೇ ತಿನ್ನುತ್ತೇವೆ ಇದು ಕೆಲವು ಸಲ ಅಪಾಯ ತರಬಹುದು.
ಮೊದಲ್ಲೆಲ್ಲಾ ಚಿಪ್ಪುಹಂದಿಗಳು ದಾರಿ ತಪ್ಪಿ ಪಟ್ಟಣ ಸಮೀಪ ಬಂದಾಗ ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ, ಇಲ್ಲವೆ ಅವರಿವರು ಚಿಪ್ಪು ಹಂದಿ ನೋಡಿದ ಸುದ್ದಿಗಳು ಅಪರೂಪವಾಗಿ ವರದಿಯಾಗುತ್ತಿದ್ದವು.ಕಾಡು ಸುತ್ತಿದರೆ ಚಿಪ್ಪುಹಂದಿಗಳ ಇರುವಿಕೆಗಳ ಗುರುತುಗಳು ಅಲ್ಲಲ್ಲಿ ಕಾಣುತ್ತಿದ್ದವು ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಡು ಸುತ್ತಿದರೆ ಚಿಪ್ಪುಹಂದಿಗಳು 25-30 ವರ್ಷಗಳ ಹಿಂದೆ ಕೊರೆದ ಹಳೆಯ ಕಾಲದ ಬಿಲಗಳು ಕಾಣುತ್ತವೆ, ಅವುಗಳಲ್ಲಿ ಬಹುತೇಕ ಬಿಲಗಳು ಮಳೆ-ಗಾಳಿ ಹೊಡೆತಕ್ಕೆ ಮುಚ್ಚುವ ಹಂತಕ್ಕೆ ಬಂದಿವೆ, ಕೆಲ ಬಿಲಗಳಲ್ಲಿ ಮುಳ್ಳುಹಂದಿಗಳು ವಾಸಿಸುತ್ತಿವೆ, ಚಿಪ್ಪುಹಂದಿಗಳು ಕೊರೆದ ಬಿಲಗಳಲ್ಲಿ ವಾಸಿಸುವ ಮುಳ್ಳುಹಂದಿಗಳಿಗೆ ಸ್ವತಃ ಬಿಲ ಕೊರೆಯಲು ಬರುವುದಿಲ್ಲ!
ಹೊಸ ಬಿಲಗಳು ಕಾಣುತ್ತಿಲ್ಲ ಅಂದರೆ ಆ ಕಾಡಲ್ಲಿ ಚಿಪ್ಪುಹಂದಿಗಳಿಲ್ಲ ಎಂದರ್ಥ.
ಚಿಪ್ಪುಹಂದಿ ಬೇಟೆಗಾರರು ಹಾರೆ, ಗುದ್ದಲಿಯೊಂದಿಗೆ ಕಾಡುನುಗ್ಗಿ ಬಿಲಗಳಲ್ಲಿ ಅವುಗಳ ಇರುವಿಕೆಯನ್ನು ಪರೀಕ್ಷಿಸುತ್ತಾರೆ,ನಂತರ ಆಳದವರೆಗೂ ಅಗೆದು ಯಾವುದೇ ಗುಂಡಿನ ಶಬ್ದವಿಲ್ಲದೆ ಸೆರೆಹಿಡಿಯುತ್ತಾರೆ, ಬಹುತೇಕ ರಸ್ತೆಯಂಚಿನಲ್ಲೇ ಅರಣ್ಯ ಇಲಾಖೆ ಗಸ್ತು ಇರುವುದರಿಂದ ಬೆಟ್ಟಗುಡ್ಡಗಳಲ್ಲಿ ಯಾವುದೇ ಭಯವಿಲ್ಲದೆ ತಮ್ಮ ಕೆಲಸ ಮಾಡುತ್ತಿರುತ್ತಾರೆ. ಮಾಂಸಕ್ಕಾಗಿ ಬೇಟೆಯಾಡುತ್ತಿದ್ದಾಗ ಇವುಗಳ ಸಂತತಿ ಸಮಧಾನಕರವಾಗಿತ್ತು, ಯಾವಾಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇದೆ ಎಂದು ಗೊತ್ತಾಯಿತೋ ಆಗ ಮಧ್ಯವರ್ತಿಗಳು ಹಾವುಗೊಲ್ಲರು, ಹಕ್ಕಿಪಿಕ್ಕಿಗಳು, ಕೆಲವು ನಿರುದ್ಯೋಗಿ ಯುವಕರನ್ನು ಸೆಳೆದು ಚಿಪ್ಪು ಸಂಗ್ರಹಿಸಲು ಪುಸಲಾಯಿಸತೊಡಗಿದರು.
ಚೀನಾದ ಸಾಂಪ್ರದಾಯಕ ಔಷಧಿ (Traditional Chinese medicine) ಇದೊಂದು ಹುಸಿ ವಿಜ್ಞಾನದಿಂದ ಕೂಡಿದ್ದು ಅದರ ಹೆಚ್ಚಿನ ಚಿಕಿತ್ಸೆಗಳು ಯಾವುದೇ ತಾರ್ಕಿಕ ಕಾರ್ಯವಿಧಾನ ಹೊಂದಿಲ್ಲ ಎಂದು ಈಗಾಗಲೇ ಹೇಳಲಾಗಿದೆ, ಈ ಸಾಂಪ್ರದಾಯಕ ಔಷದಿ ತಯಾರಿಕೆಗೆ ಸಸ್ಯಜನ್ಯ ವಸ್ತುಗಳ ಜೊತೆಗೆ ಪ್ರಾಣಿಗಳ ಅಂಗಾಂಗಗಳನ್ನು ಬಳಸುತ್ತಿರುವುದು ಅಳಿವಿನಂಚಿನ ಪ್ರಾಣಿಗಳಿಗೆ ಮತ್ತಷ್ಟು ಮಾರಕವಾಗಿದೆ, ಪ್ಯಾಂಗೋಲಿನ್ ಚಿಪ್ಪುಗಳು, ಖಡ್ಗಮೃಗದ ಕೊಂಬುಗಳನ್ನ ಹೆಚ್ಚು ಬಳಸುತ್ತಿರುವುದರಿಂದ ಈ ಜೀವಿಗಳು ಹೆಚ್ಚೆಚ್ಚು ಕಳ್ಳ ಸಾಗಾಣಿಕೆಗಾಗಿ ಬಲಿಯಾಗತೊಡಗಿದವು, ಆಫ್ರಿಕಾದ ರಾಷ್ಟ್ರಗಳಲ್ಲಿ ಚೀನಾದ ಸಾಂಪ್ರದಾಯಕ ಮೆಡಿಸನ್ನಿನ ದೊಡ್ಡ ದೊಡ್ಡ ಮಳಿಗೆಗಳನ್ನು ತೆರೆದು,ಚೀನಾ ತನ್ನ ವ್ಯಾಪಾರ ಜಾಲ ವಿಸ್ತರಿಸುತ್ತಿರುವುದು ಅಳಿವಿನಂಚಿನ ಪ್ರಾಣಿಗಳಿಗೆ ಮತ್ತಷ್ಟು ಅಪಾಯಕಾರಿಯಾಗಿದೆ. ಅಷ್ಟಕ್ಕೂ ಈ ಪ್ಯಾಂಗೋಲಿನ್ ಚಿಪ್ಪುಗಳು ಮಾನವನ ಉಗುರುಗಳಂತೆ ಕೆರಾಟಿನ್ ಎಂಬ ಪದಾರ್ಥದಿಂದ ರಚನೆಯಾಗಿದೆ, ಮುಂದೊಂದು ದಿನ ಚೀನಾದವರು ಮನುಷ್ಯನ ಉಗುರನ್ನು ಕುಟ್ಟಿ ಪುಡಿ ಮಾಡಿ ಇದು ಕಾಮೋತ್ತೇಜಕ,ತಿಂದರೆ ನಿಮ್ಮ ನರನಾಡಿಗಳು ಪುಟಿದೇಳುತ್ತವೆ ಎಂದು ಹೇಳಿದರೂ ಅಚ್ಚರಿ ಇಲ್ಲ.
1.ರಾಜ್ಯದ ಎಲ್ಲಾ 13 ವೃತ್ತಗಳಲ್ಲಿನ ಅರಣ್ಯ ಸಂಚಾರಿ ದಳಗಳು ವನ್ಯಜೀವಿ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು.
2. ಪ್ರತೀ ಪ್ರಾದೇಶಿಕ ಮತ್ತು ವನ್ಯಜೀವಿ ವಲಯಗಳು ಗಸ್ತಿನಲ್ಲಿ ಸಂಚರಿಸುವಾಗ ಕಂಡುಬರುವ ವನ್ಯಜೀವಿಗಳನ್ನು ಗಮನಿಸಿದ ಬಗ್ಗೆ ಮಾಹಿತಿ ದಾಖಲಿಸುವುದು, ಇದಕ್ಕಾಗಿ Wild Watch ಅಥವಾ ಸೂಕ್ತ ಶೀರ್ಷಿಕೆ ಯಡಿ ಪ್ರತ್ಯೇಕ ತಂತ್ರಾಂಶ ಅಭಿವೃದ್ದಿ ಪಡಿಸಬೇಕಿದೆ.
3. ವನ್ಯಜೀವಿ ಸಂರಕ್ಷಣಾ ಕಾಯ್ದೆ ಶೆಡ್ಯೂಲ್ ನಲ್ಲಿ ಸೂಕ್ತ ಬದಲಾವಣೆ ಮಾಡಿ, ಶೆಡ್ಯೂಲ್ ವಾರು 1ನೇ & 2ನೇ ಅಪರಾಧಗಳಿಗೆ ಗರಿಷ್ಠ ಶಿಕ್ಷೆ ಮತ್ತು ದಂಡ ಪ್ರಮಾಣ ಜಾರಿಗೆ ತರಬೇಕಿದೆ.
ಮುಂದುವರಿದು ಉತ್ಪ್ರೇಕ್ಷೆ ಎನಿಸಿದರೂ … ವನ್ಯಜೀವಿಗಳ ಸಂರಕ್ಷಣೆಗೆ ಅರಣ್ಯದ ಸುತ್ತಲೂ ಚೈನ್ ಲಿಂಕ್ ಮೇಶ್/ಕಾಂಪೌಂಡ್ ಅಳವಡಿಸುವ ಅನಿವಾರ್ಯತೆ ಎದುರಾಗಿರುವುದಂತೂ ಸತ್ಯ.
ಕಳೆದೊಂದು ದಶಕದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಚಿಪ್ಪುಹಂದಿಗಳನ್ನು ಬೇಟೆಯಾಡಲಾಗಿದೆ, ಪ್ರತಿ ಮೂರು ನಿಮಿಷಕ್ಕೆ ಒಂದು ಜೀವಿ ಬೇಟೆಗಾರರಿಗೆ ಬಲಿಯಾಗುತ್ತಿದೆ, ಆವಾಸ ನಾಶ, ಪ್ರತಿ ಜನನದಲ್ಲಿ ಒಂದು ಮರಿ ಮಾತ್ರ ಜನಿಸುತ್ತಿರುವುದು ಸಂತತಿ ಮತ್ತಷ್ಟು ಕುಸಿಯಲು ಕಾರಣವಾಗಿದೆ.ಒಡಿಸ್ಸಾದ ನಂದನ್ ಕಾನನ್ ಮೃಗಾಲಯವು ದೇಶದ ಏಕೈಕ ಪ್ಯಾಂಗೋಲಿನ್ ಸಂತಾನೋತ್ಪತ್ತಿ ಕೇಂದ್ರವಾಗಿದ್ದು ಇಲ್ಲಿ ರಕ್ಷಣೆ ಮಾಡಿದ ಚಿಪ್ಪು ಹಂದಿಗಳ ಸಂತಾನೋತ್ಪತ್ತಿ ಮಾಡಲಾಗುತ್ತದೆ, ಇಂತಹ ಕೇಂದ್ರಗಳನ್ನು ದೇಶದ ಅಲ್ಲಲ್ಲಿ ಸ್ಥಾಪಿಸುವ ಅಗತ್ಯ ಈಗ ಎದುರಾಗಿದೆ.
ಅರಣ್ಯ ಇಲಾಖೆಯಲ್ಲಿ ಚಿಪ್ಪುಹಂದಿಗಳ ಇರುವಿಕೆ ಗುರುತಿಸಬಲ್ಲ ಕೆಲವು ಪರಿಣಿತರನ್ನು ನೇಮಿಸಿ ಅವುಗಳ ಬಿಲದ ಬಳಿ ಕ್ಯಾಮರಾ ಅಳವಡಿಸಿ, ಆಗಾಗ ಪ್ಯಾಟ್ರೋಲಿಂಗ್ ಮಾಡುವುದು, ಕಾಡಿನ ಸಮೀಪ ವಾಸಿಸುವ ಜನರಿಗೆ ಅರಿವು ಮೂಡಿಸುವುದು, ಚಿಪ್ಪುಹಂದಿಗಳ ಕಳ್ಳಸಾಗಣೆದಾರರರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸಿ ಅವುಗಳನ್ನು ಉಳಿಸುವ ಪ್ರಯತ್ನ ಮಾಡಬೇಕಿದೆ ವನ್ಯಜೀವಿ ಪ್ರಿಯರು ಸ್ವಯಂಸೇವಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ. ಪ್ರತಿ ವರ್ಷ ಫೆಬ್ರವರಿ ಮೂರನೇ ಶನಿವಾರವನ್ನು ಅಂತರಾಷ್ಟ್ರೀಯ ಪ್ಯಾಂಗೋಲಿನ್ ದಿನವನ್ನಾಗಿ ಆಚರಿಸಲಾಗುತ್ತದೆ, ವಿಕಸನದಲ್ಲಿ ಹಿಂದಿದ್ದರೂ ಭೂಮಿಯ ಮೇಲೆ ಯಶಸ್ವಿಯಾಗಿ ಬದುಕು ಸಾಗಿಸಿದ್ದ ಜೀವಿಯೊಂದು ವಂಶನಾಶದ ಪುಟ ಸೇರುವ ಹಂತ ತಲುಪಿದ್ದು ವಿಷಾದಕರ, ಮಾನವನ ಈ ತಪ್ಪಿಗೆ ಮುಂದೆ ಬಾರಿ ಬೆಲೆ ತೆರಲೇಬೇಕಿದೆ.
ಲೇಖನ : ನಾಗರಾಜ್ ಬೆಳ್ಳೂರು
ನಿಸರ್ಗ ಕನ್ಜರ್ವೇಷನ್ ಟ್ರಸ್ಟ್
nagarajnagaraj56671@gmail.com
Leave a Comment