ಸರ್ಕಾರಿ ನೌಕರರಿಗೆ ವೇತನ ಮತ್ತು ಭತ್ಯೆ ಪರಿಷ್ಕರಿಸಲು ಅಧಿಕಾರಿಗಳ ಸಮಿತಿ ರಚಿಸಬೇಕೆಂದು ಕೋರಿ ಸಿಎಂಗೆ ಮನವಿ
ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಮಾದರಿಯ ವೇತನ ಮತ್ತು ಭತ್ಯೆ ಪರಿಷ್ಕರಿಸಲು ಅಧಿಕಾರಿಗಳ ಸಮಿತಿ ರಚಿಸಬೇಕೆಂದು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.
ಸಂಘದಿಂದ ಹಲವಾರು ವರ್ಷಗಳಿಂದ ಕೇಂದ್ರ ಮಾದರಿ ವೇತನ ನೀಡಲು ಸರ್ಕಾರಗಳಿಗೆ ಆಗ್ರಹಿಸಲಾಗಿದೆ. ಆದರೂ ಸಹ ವೇತನ ಆಯೋಗ/ಸಮಿತಿಗಳು ಅನುಸರಿಸಿದ ತಮ್ಮದೇ ಸಿದ್ಧಾಂತಗಳಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮನಾದ ವೇತನ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಶಿಫಾರಸ್ಸು ಮಾಡಿರುವುದಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇದ್ದು, ಸರ್ಕಾರಿ ನೌಕರರು ಒತ್ತಡಕ್ಕೆ ಸಿಲುಕಿರುವುದರ ಜೊತೆ ಅಪಾರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರೂ ತಮ್ಮ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಹುದ್ದೆಗಳ ಮಂಜೂರಾತಿ ಅವಶ್ಯಕವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Leave a Comment