ಬಜೆಟ್ ಕಾರ್ಮಿಕ ವಿರೋಧಿ, ಜನ ವಿರೋಧಿ, ವಿನಾಶಕಾರಿ ಬಜೆಟ್ ಆಗಿದೆ: ಸಿಐಟಿಯು ಶಿವಮೊಗ್ಗ
ಶಿವಮೊಗ್ಗ: ಸಂಸತ್ ನಲ್ಲಿ ಮಂಡಿಸಲಾದ 2022 -23 ರ ಬಜೆಟ್ ಕಾರ್ಮಿಕ ವಿರೋಧಿ, ಜನ ವಿರೋಧಿ, ವಿನಾಶಕಾರಿ ಬಜೆಟ್ ಆಗಿದ್ದು, ಕೇವಲ ಖಾಲಿ ಡಬ್ಬದಂತೆ ಸದ್ದು ಮಾಡುವ ಬಜೆಟ್ ಆಗಿದೆ ಎಂದು ಸಿಐಟಿಯು ಶಿವಮೊಗ್ಗ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ.
ಮೂಲ ಸೌಕರ್ಯ, ಉತ್ಪಾದನೆ ಮತ್ತು ಖನಿಜ ಕ್ಷೇತ್ರಗಳನ್ನು ಸಂಪೂರ್ಣವಾಗಿ ಖಾಸಗೀಕರಣದ ಚಾಲನೆಯ ಮೂಲಕ ಒಟ್ಟಾರೆ ಹತಾಷ ಮತ್ತು ವಿನಾಶಕಾರಿ ಹಿನ್ನಲೆಯಲ್ಲಿ ಬಜೆಟ್ ಪ್ರಸ್ತುತಪಡಿಸಲಾಗಿದೆ. ಇದರಿಂದ ರಾಷ್ಟ್ರೀಯ ಒಡೆತನದಿಂದ ದೇಶೀಯ ಮತ್ತು ವಿದೇಶಿ ಎರಡೂ ಖಾಸಗಿ ಕೈಗಳಿಗೆ ಸಂಪನ್ಮೂಲಗಳನ್ನು ವರ್ಗಾಯಿಸಲು ಅನುಕೂಲವಾಗುತ್ತದೆ. ಮೋದಿ ಆಡಳಿತದಲ್ಲಿ ಆರ್ಥಿಕ ನೀತಿ ರಚನೆಯನ್ನು ಸಂಸತ್ ಪ್ರಕ್ರಿಯೆ ವ್ಯಾಪ್ತಿಯಿಂದ ಕ್ರಮೇಣ ಹೈಜಾಕ್ ಮಾಡಲಾಗುತ್ತಿದೆ ಎಂದು ದೂರಿದರು.
ಬಜೆಟ್ ಭಾಷಣದಲ್ಲಿ ಹೇಳಲಾದ ಅಂಕಿ ಅಂಶಗಳು ಉದ್ಯೋಗ ಸೃಷ್ಠಿಗೆ ಹೊಂದಿಕೆಯಾಗುವುದಿಲ್ಲ. ಬಹುಪಾಲು ಶ್ರಮಜೀವಿಗಳು ಸಂಪೂರ್ಣ ಸಂಕಷ್ಟದಲ್ಲಿ ಬಳಲುತ್ತಿರುವಾಗ ಸರ್ಕಾರ ದೊಡ್ಡ ಉದ್ಯಮ ಸೇವಾ ದೃಷ್ಠಿಕೋನಕ್ಕೆ ಸಂಬಂಧಿಸಿದಂತೆ 60 ಲಕ್ಷ ಹೆಚ್ಚುವರಿ ಉದ್ಯೋಗ ಸೃಷ್ಠಿಯ ಮಾತು ಕೇವಲ ನೆಪ ಎಂಬುದು ಕಂಡುಬರುತ್ತದೆ ಎಂದರು.
ಮನ್ರೇಗಾ ಯೋಜನೆಗೆ 26 ಸಾವಿರ ಕೋಟಿ ರೂ. ಕಡಿಮೆ ಮಾಡಲಾಗಿದೆ. ರಸಗೊಬ್ಬರ, ಪೆಟ್ರೋಲಿಯಂ ಸಬ್ಸಿಡಿ ಕಡಿತಗೊಳಿಸಲಾಗಿದೆ. ಮಧ್ಯಾಹ್ನದ ಊಟದ ಯೋಜನೆಗೂ 1267 ಕೋಟಿ ರೂ. ಕಡಿತ ಮಾಡಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಹಾಗೂ ಅಂಗನವಾಡಿಗಳಿಗೆ ಅನುದಾನ ಹೆಚ್ಚಳ ಮಾಡಿಲ್ಲ. ದುಡಿಯುವ ಜನರಿಗೆ ಬಜೆಟ್ ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮತ್ತೊಂದೆಡೆ ಕಾರ್ಪೋರೇಟ್ ಧಣಿಗಳಿಗೆ ರಿಯಾಯಿತಿ ಘೋಷಿಸಿ ಉದಾರತೆ ತೋರಿಸಿದೆ. ಈ ಮೂಲಕ ತೆರಿಗೆ ತಪ್ಪಿಸುವ ಕಾರ್ಪೋರೇಟ್ ಸಮುದಾಯದಿಂದ ತೆರಿಗೆ ವಂಚನೆಯನ್ನು ಉತ್ತೇಜಿಸಿದೆ ಎಂದು ಟೀಕಿಸಿದರು.
ಈ ಹಿನ್ನಲೆಯಲ್ಲಿ ಪ್ರಸ್ತುತ ಬಜೆಟ್ ಸಂಪೂರ್ಣವಾಗಿ ಜನವಿರೋಧಿ ಮತ್ತು ರಾಷ್ಟ್ರೀಯ ಆರ್ಥಿಕತೆಗೆ ವಿನಾಶಕಾರಿ ಎಂದು ಸಿಐಟಿಯು ಪರಿಗಣಿಸಿದ್ದು, ಈ ವಿನಾಶಕಾರಿ ನೀತಿ ಆಡಳಿತ ವಿರೋಧಿಸಿ ದೇಶಾದ್ಯಂತ ಐಕ್ಯ ಪ್ರತಿರೋಧ ಹೋರಾಟಕ್ಕೆ ದುಡಿಯುವ ಜನರನ್ನು ಅಣಿಗೊಳಿಸಲು ಕರೆ ನೀಡಿದ್ದು, ದೇಶವ್ಯಾಪಿ ಎರಡು ದಿನಗಳ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಸಿಐಟಿಯು ತಿಳಿಸಿದೆ.
ಈ ಸಂದರ್ಭದಲ್ಲಿ ಸಿಐಟಿಯು ಸಹ ಕಾರ್ಯದರ್ಶಿ ಹನುಮಮ್ಮ, ಪ್ರಮುಖರಾದ ಟಿ. ಭಾಗ್ಯಮ್ಮ, ಸೂರ್ಯಕಲಾ, ಮೀನಾಕ್ಷಿ ಬಾಯಿ ಮೊದಲಾದವರಿದ್ದರು.

Leave a Comment