ಶಿವಮೊಗ್ಗ: ಹಿಜಾಬ್ ವಿವಾದ ;ಇಂದೂ ಮುಂದುವರೆದ ತರಗತಿ ಬಹಿಷ್ಕಾರ
ಶಿವಮೊಗ್ಗ: ಹಿಜಾಬ್ ವಿವಾದ ಇಂದು ಕೂಡ ಮುಂದುವರೆದಿದ್ದು, ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದ್ದಾರೆ. ರಾಜ್ಯದಲ್ಲಿ ಇಂದಿನಿಂದ ಪಿಯು ಮತ್ತು ಪದವಿ ಕಾಲೇಜ್ ಗಳು ಆರಂಭವಾಗಿವೆ. ನಗರದ ಎರಡು ಕಾಲೇಜ್ ಗಳಿಗೆ ರಜೆ ನೀಡಲಾಗಿದೆ.
ನಗರದ ಕೆಲವು ಕಾಲೇಜ್ ಗಳಲ್ಲಿ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಶಾಲಾ ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿದೆ. ಈ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿನಿಯರು ನಮಗೆ ವಿದ್ಯೆಗಿಂತ ಧರ್ಮವೇ ಮುಖ್ಯವೆಂದು ವಾಪಸ್ ತೆರಳಿದ ಘಟನೆ ನಗರದ ಕೆಲವು ಕಾಲೇಜ್ ಗಳಲ್ಲಿ ನಡೆದಿದೆ.
ಹಿಬಾಬ್ ನಮ್ಮ ಜನ್ಮಸಿದ್ಧ ಹಕ್ಕು. ಸಾಂವಿಧಾನಿಕ ಹಕ್ಕಾಗಿದ್ದು, ಹೈಕೋರ್ಟ್ ಆದೇಶ ಏನೇ ಇರಲಿ. ನಮಗೆ ಹಿಜಾಬ್ ಬೇಕು, ಶೀಕ್ಷಣವೂ ಬೇಕು ಎಂದು ಪಟ್ಟು ಹಿಡಿದರು. ಕಾಲೇಜಿನ ಪ್ರಾಂಶುಪಾಲರು, ಹಿರಿಯ ಅಧ್ಯಾಪಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ವಿದ್ಯಾರ್ಥಿನಿಯರು ತಮ್ಮ ಪಟ್ಟು ಸಡಿಲಿಸಲಿಲ್ಲ.
ಮನೆಗೆ ವಾಪಸ್ ಹೋಗಿದ್ದ ಕೆಲವು ವಿದ್ಯಾರ್ಥಿನಿಯರು ಕೆಲ ಸಮಯದ ನಂತರ ಮತ್ತೆ ಕಾಲೇಜಿಗೆ ಬಂದು ತರಗತಿಗೆ ಪ್ರವೇಶ ನೀಡಬೇಕೆಂದು ಕಾಲೇಜ್ ಹೊರ ಆವರಣದಲ್ಲಿ ನಿಂತು ಮನವಿ ಮಾಡಿದರು.
ನಗರದ ಡಿವಿಎಸ್ ಕಾಲೇಜ್, ಎ.ಟಿ.ಎನ್.ಸಿ. ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಿಲ್ಲ. ಈ ವೇಳೆ ಕೆಲವು ಪೋಷಕರು, ಕಾಲೇಜಿಗೆ ಪ್ರವೇಶ ಪಡೆಯುವಾಗಲೇ ಹಿಜಾಬ್ ಧರಿಸಿ ಬಂದವರಿಗೆ ಪ್ರವೇಶವಿಲ್ಲ ಎಂದು ಮೊದಲೇ ತಿಳಿಸಬೇಕಿತ್ತು. ಈಗ ಪ್ರವೇಶ ನಿರಾಕರಿಸುತ್ತಿದ್ದಾರೆ. ಹೈಕೋರ್ಟ್ ಆದೇಶದ ನೆಪ ಹೇಳಿ ನಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.,
ಒಮ್ಮೆ ಕಾಲೇಜಿನ ಆವರಣದಿಂದ ತೆರಳಿದ್ದ ಕೆಲವು ವಿದ್ಯಾರ್ಥಿನಿಯರು ಮತ್ತೆ ಬಂದು ಅನಾವಶ್ಯಕವಾಗಿ ವಾದ ಮಾಡಿದರು. ಈ ವೇಳೆ ಪೊಲೀಸರು ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಗುಂಪುಗೂಡಬೇಡಿ. ಕಾಲೇಜಿಗೆ ಹೋಗಿ ಇಲ್ಲವೇ ಮನೆಗೆ ತೆರಳಿ ಎಂದು ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಬಾಪೂಜಿನಗರದ ಸರ್ಕಾರಿ ಪದವಿ ಕಾಲೇಜ್ ಮತ್ತು ಸೈನ್ಸ್ ಮೈದಾನದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಕಾಲೇಜಿನೊಳಗೆ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಕಾಲೇಜ್ ಗಳು, ಶಾಲೆಗಳ ಬಳಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

Leave a Comment