ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸಿದ ಶಿಮುಲ್: ಶಿವರಾತ್ರಿ ಕೊಡುಗೆ*

ಶಿವಮೊಗ್ಗ; ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟವು ಮಹಾಶಿವರಾತ್ರಿ ಕೊಡುಗೆಯಾಗಿ ಮಾರ್ಚ್ 01 ರಿಂದ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಾದ ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಕೆ.ಜಿ. ಗೆ ರೂ.2.50 ಹೆಚ್ಚಿಸಲಾಗಿದೆ ಎಂದು ಶಿಮುಲ್ ಅಧ್ಯಕ್ಷ ಶ್ರೀಪಾದ್‍ರಾವ್ ತಿಳಿಸಿದರು.  
     ಶಿಮುಲ್, ಮಾಚೇನಹಳ್ಳಿ ಇಲ್ಲಿ ಇಂದುವ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಕ್ಕೂಟವು ತನ್ನ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಕಾಲ ಕಾಲಕ್ಕೆ ದರ ಪರಿಷ್ಕರಿಸುತ್ತಾ ಬಂದಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಪ್ರಗತಿಯಾಗಿದ್ದು ಫೆ.28 ರಂದು ನಡೆದ ಒಕ್ಕೂಟದ 416 ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 
     ಪ್ರಸ್ತುತ ದರ ಕೆ.ಜಿ ಒಂದಕ್ಕೆ ರೂ. 25.63 ಇದ್ದು ಇದನ್ನು ಪ್ರತಿ ಕೆ.ಜಿ ಗೆ ರೂ.27.86 ಕ್ಕೆ (ಫ್ಯಾಟ್ ೩.೫% ಎಸ್ಎಫ್ಎನ್ ೮.೫೦ ಇರುವ ಹಾಲು)ಹೆಚ್ಚಿಸಲಾಗಿದೆ. ಈ ಪರಿಷ್ಕøತ ದರವು ಮಾ.01 ರಿಂದ ಜಾರಿಗೆ ಬರಲಿದೆ. ಹೆಚ್ಚು ಹಾಲಿನ ಉತ್ಪಾದನೆ ಮತ್ತು ಹೆಚ್ಚು ಮಾರಾಟದ ಉದ್ದೇಶದಿಂದ ಹಾಗೂ ರೈತರಿಗೆ ಉತ್ತಮ ಆದಾಯ ನೀಡುವ ದೃಷ್ಟಿಯಿಂದ ಒಕ್ಕೂಟ ದರ ಹೆಚ್ಚಳದ ತೀರ್ಮಾನ ಕೈಗೊಂಡಿದೆ.
  ಒಕ್ಕೂಟದ ವ್ಯಾಪ್ತಿಯಲ್ಲಿ 1.65 ಲಕ್ಷ ರೈತರಿದ್ದು 1360 ಸೊಸೈಟಿಗಳಿವೆ. ಪ್ರತಿ ದಿನ ಗುಣಮಟ್ಟದ ಹಾಲನ್ನು ರೈತರಿಂದ ಸ್ವೀಕರಿಸಲಾಗುತ್ತಿದೆ. ಈಗ ಹೆಚ್ಚಿಸಿರುವ ದರದಿಂದ ಶಿಮುಲ್ ಪ್ರತಿ ತಿಂಗಳು ರೂ.
4.6 ಕೋಟಿ ಹೆಚ್ಚುವರಿ ಹಣ ಪಾವತಿಸಬೇಕಿದೆ.
    ಜನವರಿ ಮಾಹೆಯಲ್ಲಿ ಒಕ್ಕೂಟಕ್ಕೆ ರೂ. 5.5 ಕೋಟಿ, ಫೆಬ್ರವರಿಯಲ್ಲಿ 1.75 ಕೋಟಿ ಲಾಭ ಆಗಿದೆ. ಮಾರ್ಚ್ ಅಂತ್ಯಕ್ಕೆ 2022 ನೇ ಸಾಲಿಗೆ ಅಂದಾಜು ರೂ. 65 ರಿಂದ 70 ಕೋಟಿ ನಿವ್ವಳ ಲಾಭವಾಗಲಿದೆ.
    ನಂದಿನಿ ಹಾಲು ಮತ್ತು ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿದ್ದು, ಗುಣಮಟ್ಟದಲ್ಲಿ  ರಾಜ್ಯದಲ್ಲಿ 2 ನೇ ಸ್ಥಾನದಲ್ಲಿದೆ. 
     ನಂದಿನಿ ಹಾಲಿಗೆ ಹೊರ ರಾಜ್ಯಗಳಿಂದ ಸಹ ಬೇಡಿಕೆ ಹೆಚ್ಚುತ್ತಿದೆ. ಇದೀಗ ದೆಹಲಿ, ಕೇರಳ, ತೆಲಂಗಾಣಗಳಿಗೆ ನಮ್ಮ ಹಾಲು ಹೋಗುತ್ತಿದೆ. ನಂದಿನಿ ಹಾಲನ್ನು ಪ್ರತಿ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಸಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
   ಶಿವಮೊಗ್ಗ ಹಾಲು ಒಕ್ಕೂಟದ ಆಡಳಿಂತ ಮಂಡಳಿ ನಿರ್ದೇಶಕರುಗಳು, 
ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಸವರಾಜಪ್ಪ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.