ಹರ್ಷ ಹತ್ಯೆ ಪ್ರಕರಣ: ಇಬ್ಬರ ಬಂಧನ; ಎಡಿಜಿಪಿ ಪ್ರತಾಪ್ ರೆಡ್ಡಿ

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇನ್ನು ಅವರಿಂದ ಮಾಹಿತಿ ಪಡೆದು ಉಳಿದ ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೊಲೆ ಪ್ರಕರಣದಿಂದ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ಸ್ಥಿತಿ ಉಂಟಾಗಿತ್ತು. ಇದರಿಂದ ಅನೇಕ ಕಡೆ ಕಾನೂನು ವಿರೋಧಿ ಘಟನೆಗಳು ಜರುಗಿ ಕಾನೂನು ಸುವ್ಯಸ್ಥೆಗೆ ಧಕ್ಕೆ ಉಂಟಾಗಿತ್ತು. ಇದನ್ನು ಪರಿಶೀಲಿಸಲು ನಾನು ಶಿವಮೊಗ್ಗಕ್ಕೆ ಆಗಮಿಸಿದ್ದು, ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿ ಮುರುಗನ್, ಪೂರ್ವ ವಲಯ ಪ್ರಭಾರ ಐಜಿಪಿ ತ್ಯಾಗರಾಜನ್, ಎಸ್.ಪಿ. ಲಕ್ಷ್ಮಿ ಪ್ರಸಾದ್ ಅವರ ಜೊತೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ರಾಜ್ಯದೆಲ್ಲೆಡೆಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಿದ್ದೇವೆ ಎಂದರು.
ಆರ್.ಎ.ಎಫ್. ತುಕಡಿ ಇಲ್ಲೇ ಮೊಕ್ಕಾಂ ಹೂಡಿದೆ. ಎಲ್ಲಾ ಘಟನೆಗಳ ಬಗ್ಗೆ ಪ್ರಕರಣ ದಾಖಲಿಸಿದ್ದೇವೆ. ತನಿಖೆ ಸೂಕ್ಷ್ಮವಾಗಿರುವುದರಿಂದ ಆರೋಪಿಗಳ ದಸ್ತಗಿರಿ ಮಾಡಿದ ಮೇಲೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಮಾಹಿತಿ ನೀಡಲಾಗುವುದು ಎಂದರು.
ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಖಚಿತ ಸುಳಿವು ಸಿಕ್ಕಿದ್ದು, ಪೊಲೀಸರ ಬಳಿ ಎಲ್ಲಾ ಮಾಹಿತಿ ಇದ್ದು, ಅವರನ್ನು ಗುರುತಿಸಲಾಗಿದೆ. ಅವರು ಅಪರಾಧ ಹಿನ್ನಲೆಯುಳ್ಳವರಾಗಿದ್ದಾರೆ ಎಂದು ಮಾಹಿತಿ ನೀಡಿದರು.
13 ಬೇರೆ ಬೇರೆ ಸ್ಥಳಗಳಲ್ಲಿ ಗಲಭೆಗೆ ಸಂಬಂಧಿಸಿದಂತೆ ಅಹಿತಕರ ಘಟನೆಗಳು ನಡೆದಿವೆ. ವಾಹನಗಳನ್ನು ಕೆಲವೆಡೆ ಸುಟ್ಟಿದ್ದು, ಅದರ ವಾರಸುದಾರರ ಪತ್ತೆ ಕಾರ್ಯ ನಡೆದಿದೆ. ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಮೂರು ಎಫ್ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆಲವರ ಬಂಧಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಯುತ್ತಿದೆ ಎಂದರು.

ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಇನ್ನುಮುಂದೆ ಇಂತಹ ಅಹಿತಕರ ಘಟನೆ ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು ಕೂಡ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದು, ನಿನ್ನೆಯಿಂದಲೇ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇಂದು ಬೆಳಗಿನ ಜಾವ ಆಟೋ, ದ್ವಿಚಕ್ರವಾಹನ ಸೇರಿ 4 ವಾಹನಗಳಿಗೆ ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ಬೆಂಕಿ ಹಚ್ಚಿದ್ದು, ಪರಿಸ್ಥಿತಿ ನೋಡಿ ಪ್ರತಿಬಂಧಕಾಜ್ಞೆ ಸಡಿಲಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ತೀರ್ಮಾನಿಸುತ್ತಾರೆ ಎಂದರು.
ಸೆಕ್ಷನ್ ಇದ್ದರೂ ಮೆರವಣಿಗೆಗೆ ಅವಕಾಶ ನೀಡಿದ ಬಗ್ಗೆ ಮತ್ತು ಆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳ ಬಗ್ಗೆ ಹಾಗೂ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ಅಸಹಾಯಕರಾಗಿ ನಿಂತಿದ್ದರು ಎನ್ನುವ ಆರೋಪದ ಬಗ್ಗೆಯೂ ಕೂಡ ಪರಿಶೀಲನೆ ನಡೆಸಿ ಎಲ್ಲಾ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಎಲ್ಲರ ಮೇಲೂ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ರಾಜಕಾರಣಿಗಳ ಹೇಳಿಕೆಗಳು ಪ್ರಚೋದನೆಗೆ ಕಾರಣವಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಸದ್ಯಕ್ಕೆ ಪೊಲೀಸ್ ಕರ್ತವ್ಯದ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ. ಪ್ರಚೋದನಾಕಾರಿ ಹೇಳಿಕೆಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಾಗ ಅದರ ಬಗ್ಗೆ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.