ಅಭಿವೃದ್ಧಿಯ ಬಗ್ಗೆ ಗಮನಹರಿಸುವಂತೆ ಅಣ್ಣ ಹಜಾರೆ ಹೋರಾಟ ಸಮಿತಿ ವತಿಯಿಂದ ಪಾಲಿಕೆಗೆ ಮನವಿ

ಶಿವಮೊಗ್ಗ:  ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಬಂಡವಾಳ ರಹಿತ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ರಹಿತ ಅಭಿವೃದ್ಧಿಯ ಬಗ್ಗೆ ಗಮನಹರಿಸುವಂತೆ ಅಣ್ಣ ಹಜಾರೆ ಹೋರಾಟ ಸಮಿತಿ ವತಿಯಿಂದ ಇಂದು ಪಾಲಿಕೆಗೆ ಮನವಿ ಸಲ್ಲಿಸಲಾಗಿದೆ.
ಇಂದು ನಗರ ಪಾಲಿಕೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ಮನವಿ ಮಾಡಲಾಗಿದ್ದು, ಜನರಿಗೆ ಮೂಲಸೌಕರ್ಯ ಒದಗಿಸುವುದು ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಆದರೆ, ಮೂಲಸೌಕರ್ಯಗಳನ್ನು ವ್ಯವಹಾರಿಕವಾಗಿ ನೋಡುತ್ತಾ ಹೆಚ್ಚಿನ ಶುಲ್ಕ ವಿಧಿಸುತ್ತಿರುವುದನ್ನು ಕೈಬಿಡುವಂತೆ ಒತ್ತಾಯಿಸಲಾಗಿದೆ.

ಗೃಹ ಬಳಕೆಯ ವಿದ್ಯುತ್ ಶುಲ್ಕ ಹೆಚ್ಚಳ ಮಾಡಿದ್ದು, ಇದರಿಂದಾಗಿ ಗೃಹ ಬಳಕೆಯ  ಗ್ರಾಹಕರು ಪರಿತಪಿಸುವಂತಾಗಿದೆ. ಕುಡಿಯುವ ನೀರಿನ ಕರ ಕೂಡ ಹೆಚ್ಚಳ ಮಾಡಿದ್ದು, ಮೀಟರ್ ಲೆಕ್ಕದಲ್ಲಿ ಬಿಲ್ ಪಾವತಿ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಮಾಡಲಾಗಿದೆ. ಇದನ್ನು ಕಡಿಮೆ ಮಾಡುವಂತೆ ಕೋರಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಹಲವು ರಸ್ತೆ, ಚರಂಡಿ, ಫುಟ್ ಪಾತ್, ವಿದ್ಯುತ್ ಮಾರ್ಗ ಮೊದಲಾದ ಕೆಲಸಗಳು ನಡೆಯುತ್ತಿದ್ದು, ಬಹುತೇಕ ಕಾಮಗಾರಿಗಳು ಕಳಪೆಯಾಗಿದ್ದು, ಇದರಿಂದ ನಾಗರಿಕರ ತೆರಿಗೆ ಹಣ ಪೋಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಲಾಗಿದೆ.

ನಗರದಲ್ಲಿ ಸ್ವಚ್ಛ ಪರಿಸರ ಕಾಪಾಡುವ ನಿಟ್ಟಿನಲ್ಲಿ ಹಾಗೂ ನಗರವನ್ನು ತಂಪಾಗಿರಿಸಲು ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕಿದೆ. ಇಂತಹ ಕೆಲಸಗಳಿಗೆ ಸಾರ್ವಜನಿಕರು ಕೂಡ ನೆರವು ನೀಡಲಿದ್ದಾರೆ. ಅನೇಕ ಕಟ್ಟಡ ಮಾಲೀಕರು ಸೆಟ್ ಬ್ಯಾಕ್ ಬಿಡದೆ ನಿರ್ಮಾಣ ಮಾಡಿದ್ದು, ಅಂತಹವುಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಅಶೋಕ್ ಯಾದವ್ ಮತ್ತಿತರರು ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.