ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ. 19 ರಂದು ವಿಧಾನಸೌಧ –ಹೈಕೋರ್ಟ್ ಚಲೋ ಪ್ರತಿಭಟನಾ ಮೆರವಣಿಗೆ

ಶಿವಮೊಗ್ಗ: ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಪಾಟೀಲರ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ. 19 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ರೈಲ್ವೇ ನಿಲ್ದಾಣದಿಂದ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆವರೆಗೆ ಪ್ರತಿಭಟನಾ ಮೆರವಣಿಗೆ, ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ವತಿಯಿಂದ ವಿಧಾನಸೌಧ –ಹೈಕೋರ್ಟ್ ಚಲೋ ಹಮ್ಮಿಕೊಳ್ಳಲಾಗಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖ ಎಂ. ಗುರುಮೂರ್ತಿ ಮಾಹಿತಿ ನೀಡಿ, ಜ. 26 ರಂದು ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಪಾಟೀಲ್ ಅವರು ಸಂವಿಧಾನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ದೂರಿದರು. 

ಪಾಟೀಲ್ ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಹಲವು ದಲಿತ, ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಕೀಲರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಈ ವಿಷಯದ ಕುರಿತು ರಾಜ್ಯದ ಹೈಕೋರ್ಟ್ ಫುಲ್ ಬೆಂಚ್ ತೀರ್ಮಾನ ತೆಗೆದುಕೊಳ್ಳಲು ಸಿಟಿಂಗ್ ಕೂತರೂ ಯಾವುದೇ ತಾರ್ಕಿಕ ಅಂತ್ಯ ಕೊಡದೇ ರಾಷ್ಟ್ರೀಯ ಹಬ್ಬಗಳು, ಮತ್ತು ಸಂವಿಧಾನ ದಿನದಂದು ಮಾತ್ರ ಅಂಬೇಡ್ಕರ್ ಭಾವಚಿತ್ರ ಇಡಬೇಕೆಂದು ತೀರ್ಮಾನ ತೆಗೆದುಕೊಂಡಿದೆ. ಆದರೆ, ರಾಯಚೂರು ಜಿಲ್ಲಾ ನ್ಯಾಯಾಧೀಶರ ಮೇಲೆ ನಡೆಯಬೇಕಿರುವ ಕ್ರಮದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಸಂವಿಧಾನ ವಿರೋಧಿ ಮಲ್ಲಿಕಾರ್ಜುನಗೌಡ ಪಾಟೀಲ್ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲಾ ಹಂತದ ಕೋರ್ಟ್ ಹಾಲ್ ಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರವನ್ನು ಅಳವಡಿಸಲು ಆದೇಶ ಹೊರಡಿಸಬೇಕು. ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಮೀಸಲಾತಿ/ ಪ್ರಾತಿನಿಧ್ಯ ನೀಡಬೇಕು. ಸಂವಿಧಾನ ವಿರೋಧಿ ಹುಮ್ನಾಬಾದ್ ತಹಶೀಲ್ದಾರ್ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಬಸಪ್ಪ, ಹರಿಗೆ ರವಿ, ಚಿಕ್ಕಮರಡಿ ರಮೇಶ್, ಕೊನಗವಳ್ಳಿ ಮಹದೇವ, ಅಶೋಕ ಜೀನಹಳ್ಳಿ ಮೊದಲಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.