*ಶಿವಮೊಗ್ಗ ಗಲಭೆ: ಮೃತ ಹರ್ಷನ ಕುಟುಂಬಕ್ಕೆ 10 ಲಕ್ಷ ರೂ. ನೆರವು ಘೋಷಿಸಿದ ಸಚಿವ ಅಶ್ವತ್ಥನಾರಾಯಣ*

ಬೆಂಗಳೂರು: ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು 10 ಲಕ್ಷ ರೂ.ಗಳ ನೆರವನ್ನು ಘೋಷಿಸಿದ್ದಾರೆ.

ಈ ಬಗ್ಗೆ ಹೇಳಿಕೆ‌ ನೀಡಿರುವ ಅವರು ಡಾ.ಸಿ.ಎನ್ ಅಶ್ವತ್ಥನಾರಾಯಣ ಫೌಂಡೇಶನ್ ನಿಂದ ಪರಿಹಾರದ ಮೊತ್ತ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸಚಿವರು ಬುಧವಾರ ಸಂಜೆ ಹರ್ಷ ಅವರ ತಾಯಿ ಜತೆ ದೂರವಾಣಿ ಮೂಲಕ ಮಾತನಾಡಿ ಸಂತ್ವಾನ ಹೇಳಿದರು.

``ಹರ್ಷ ಈ ದೇಶ ಮತ್ತು ಸಮಾಜಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ್ದಾನೆ. ಇಂತಹ ಸಂಕಷ್ಟದ ಸಮಯದಲ್ಲಿ ಆತನ ಕುಟುಂಬದ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಘೋಷಿಸಿರುವ ಹಣವನ್ನು ಹರ್ಷನ ತಾಯಿಯವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು,’’ ಎಂದಿದ್ದಾರೆ.

``ಮೂಲಭೂತವಾದಿಗಳು ಹರ್ಷನಂತಹ ಒಬ್ಬ ಸೇವಾ ಮನೋಭಾವದ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದ್ದಾರೆ. ದುಷ್ಕರ್ಮಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗದಲ್ಲಿ ನಡೆದಿರುವ ಹೇಯ ಕೃತ್ಯವನ್ನು ಸಂವೇದನಾಶೀಲರೆಲ್ಲ ಖಂಡಿಸಬೇಕು,’’ ಎಂದು ಅವರು ಹೇಳಿದ್ದಾರೆ.

``ಬಿಜೆಪಿ ಸರಕಾರವು ಸಮಾಜದಲ್ಲಿ ಸೌಹಾರ್ದ ಸ್ಥಾಪನೆಗೆ ಬದ್ಧವಾಗಿದೆ. ನಾಗರಿಕ ಸಮಾಜದಲ್ಲಿ ವಾದ-ವಿವಾದಗಳು ಸಹಜ. ಆದರೆ ಶಿವಮೊಗ್ಗದಲ್ಲಿ ನಡೆದಿರುವುದು ಬರ್ಬರ ಮತ್ತು ಅಮಾನವೀಯ ಘಟನೆಯಾಗಿದೆ. ಸಮಾಜವಿರೋಧಿ ಶಕ್ತಿಗಳನ್ನು ಸರಕಾರವು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲಿದೆ. ಈ ಘಟನೆಯ ಹಿಂದೆ ಯಾರಾರಿದ್ದಾರೆ ಮತ್ತು ಯಾವ್ಯಾವ ಸಂಘಟನೆಗಳ ಕುಮ್ಮಕ್ಕಿದೆ ಎನ್ನುವುದನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು’’ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.