ಅಂಬೇಡ್ಕರ್ ಅವರಿಗೆ ಅಪಮಾನ;ನ್ಯಾಯಾಧೀಶರ ವಿರುದ್ದ ಕೇಸ್ ದಾಖಲು ಮಾಡುವಂತೆ ಡಿ ಎಸ್ ಎಸ್ ಗುರುಮೂರ್ತಿ ಆಗ್ರಹ

ಶಿವಮೊಗ್ಗ: ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸ್ ದಾಖಲಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್. ಗುರುಮೂರ್ತಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನದ ಅಡಿಯಲ್ಲಿಯೇ ನ್ಯಾಯಾಧೀಶರಾಗಿ ಸ್ಥಾನ ಪಡೆದು ನ್ಯಾಯದಾನ ಮಾಡುವಂತಹ ನ್ಯಾಯಾಧೀಶರೇ ಅಂಬೇಡ್ಕರ್ ಅವರನ್ನು ಅಗೌರವ ಮಾಡುತ್ತಾರೆ ಎಂದರೆ, ಅದು ವಿಷಾದನೀಯ. ಸಂವಿಧಾನ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ರಾಯಚೂರು ನ್ಯಾಯಾಧೀಶರರು ಅಂಬೇಡ್ಕರ್ ಅವರ ಮೌಲ್ಯಗಳನ್ನೇ ನಾಶ ಮಾಡಿದ್ದಾರೆ. ಮೌಲ್ಯಗಳನ್ನು ಎತ್ತಿಹಿಡಿಯುತ್ತೇವೆ ಎಂಬ ಪ್ರತಿಜ್ಞೆಗೆ ವಿರೋಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಅಂಬೇಡ್ಕರ್ ಫೋಟೋ ಇದ್ದರೆ ಧ್ವಜಾರೋಹಣ ಮಾಡುವುದಿಲ್ಲ ಎಂಬ ಹೇಳಿಕೆ ನೀಡಿ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಇದೊಂದು ಅಕ್ಷಮ್ಯ ಅಪರಾಧವಾಗಿದೆ. ಆದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಅಂಬೇಡ್ಕರ್ ಅವರ ಫೋಟೋ ಇಡಲು ಸರ್ಕಾರದ ಸ್ಪಷ್ಟ ಆದೇಶವಿದೆ. ಅದು ಏಕೆ ನ್ಯಾಯಾಧೀಶರು ವಿರೋಧಿಸಿದರೋ ಗೊತ್ತಿಲ್ಲವಾಗಿದೆ. ಅಂಬೇಡ್ಕರ್ ಅವರು ರಾಷ್ಟ್ರನಾಯಕರಾಗಿರುವ ಕಾರಣ ಅವರನ್ನು ಅಪಮಾನಿಸಿರುವುದು ದೇಶದ್ರೋಹವೇ ಆಗಿರುತ್ತದೆ. ಹಾಗಾಗಿ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕೇಸ್ ದಾಖಲಿಸಿಕೊಂಡು ಕಠಿಣ ಕ್ರಮ ಜರುಗಿಸಬೇಕು. ಇಂತಹ ಪ್ರಕರಣ ಮತ್ತೆ ಮತ್ತೆ ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದರೆ ನಮ್ಮ ಸಮಿತಿ ರಾಜ್ಯಾದ್ಯಂತ ಬಹುದೊಡ್ಡ ಹೋರಾಟ ರೂಪಿಸುತ್ತದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ , ಕರಿಯಪ್ಪ ಅತ್ತಿಗುಂದ, ಹರಿಗೆ ರವಿ, ರಮೇಶ್ ಚಿಕ್ಕಮರಡಿ ಏಳು ಕೋಟಿ ಮೊದಲಾದವರಿದ್ದರು..

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.