ಶಿವಮೊಗ್ಗ :ಸೂಡಾ ಅಧ್ಯಕ್ಷರಾಗಿ ತಾವು ಮಾಡಿದ ಸೇವೆ ಸಾರ್ಥಕವಾಗಿದೆ:ಎಸ್.ಎಸ್.ಜ್ಯೋತಿಪ್ರಕಾಶ್

ಶಿವಮೊಗ್ಗ: ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ೨೦೨೦ ರಿಂದ ತಾವು ಮಾಡಿದ ಸೇವೆ ಸಾರ್ಥಕವಾಗಿದ್ದು, ಇದಕ್ಕೆ ಅವಕಾಶ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ನಿರ್ಗಮಿತ ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಮಾಡಿದ ಸೇವೆಗಾಗಿ ಸೂಡಾ, ಎಪಿಎಂಸಿ ಯಲ್ಲಿ ಆಡಳಿತ ನಡೆಸುವ ಅವಕಾಶವನ್ನು ಪಕ್ಷ ನೀಡಿತ್ತು. ಈ ಎಲ್ಲ ಅವಕಾಶಗಳನ್ನು ಜನಪರ ಕೆಲಸಗಳಿಗೆ ಬಳಸಿದ್ದೇನೆ ಎಂದು ಹೇಳಿದರು.

ಕಾನೂನು ಸುಳಿಯಲ್ಲಿದ್ದ ವಾಜಪೇಯಿ ಬಡಾವಣೆಯ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಅಧಿಕಾರಿಗಳ ತಪ್ಪಿನಿಂದಾಗಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ವಿವಾದಿತ ನಿವೇಶನಗಳನ್ನು ವಿಭಾಗವಾರು ವಿಂಗಡಣೆ ಮಾಡಿ ಲೋಕಾಯುಕ್ತಕ್ಕೆ ಮಾಹಿತಿ ನೀಡಿದ ಮೇಲೆ ಅಲ್ಲಿನ ಕಾನೂನು ಸಮಸ್ಯೆ ಇತ್ಯರ್ಥ ಮಾಡಲಾಯಿತು ಎಂದು ಹೇಳಿದರು. ಊರುಗಡೂರು ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತವಾಗಿತ್ತು. ಅಲ್ಲಿನ ಭೂ ಮಾಲೀಕರೊಂದಿಗೆ ಸಂಧಾನ ಮಾಡಿ ೬೦.೩೦ ಎಕರೆ ಜಾಗವನ್ನು ವಶಪಡಿಸಿಕೊಂಡು ಮುಂದಿನ ಪ್ರಕ್ರಿಯೆಗಳು ಜಾರಿಯಲ್ಲಿವೆ ಎಂದು ಜ್ಯೋತಿಪ್ರಕಾಶ್ ಹೇಳಿದರು.
ಸೂಡಾ ಅಧ್ಯಕ್ಷರಾದ ಮೇಲೆ ಕೆರೆ ಮತ್ತು ಪಾರ್ಕುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು. ಭದ್ರಾವತಿ ಜನ್ನಾಪುರ, ಶಿವಮೊಗ್ಗ ಸೋಮಿನಕೊಪ್ಪ ಕೆರೆ ಅಭಿವೃದ್ಧಿ ಮಾಡಲಾಗಿದೆ. ಒಟ್ಟು ೧೦.೨೨ ಕೋಟಿ ರೂ.ವೆಚ್ಚದ ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಒಟ್ಟು ೧೩ ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ೧೩ ಪಾರ್ಕುಗಳನ್ನು ಅಭಿವೃದ್ಧಿ ಮಾಡಲಾಗಿದೆ. ಕೊರೊನ ಕಾರಣದಿಂದ ಕಾಮಗಾರಿ ವಿಳಂಬವಾಯಿತು. ಮುಂದಿನ ಅಧ್ಯಕ್ಷರ ಅವಧಿಯಲ್ಲಿ ಕಾಮಗಾರಿ ಪ್ರಗತಿ ಕಾಣಲಿವೆ ಎಂದು ಅವರು ಹೇಳಿದರು.
ಶಿವಮೊಗ್ಗದಲ್ಲಿ ೧೦೬ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆಯೂ ಪ್ರಗತಿಯಲ್ಲಿದ್ದು, ಇದೊಂದು ವಿನೂತನ ಪ್ರಯತ್ನವಾಗಿದ್ದು, ಸರಕಾರ ಅನುಮತಿ ನೀಡಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಜಗದೀಶ್, ಪ್ರಮುಖರಾದ ಮಂಡೇನಕೊಪ್ಪ ದೇವರಾಜ್, ಮೋಹನ್ ರೆಡ್ಡಿ, ಎಪಿಎಂಸಿ ಸದಸ್ಯೆ ಭಾಗ್ಯಮ್ಮ, ಬಳ್ಳೇಕೆರೆ ಸಂತೋಷ್ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.