*ಕುವೆಂಪು ವಿಶ್ವವಿದ್ಯಾಲಯದಲ್ಲಿ 73ನೇ ಗಣರಾಜ್ಯೋತ್ಸವ*

 *ಬಲಿಷ್ಠ ಸಂವಿಧಾನದಿಂದ ಬಲಿಷ್ಠ ದೇಶ ನಿರ್ಮಾಣ: ಪ್ರೊ. ಬಿ. ಪಿ.  ವೀರಭದ್ರಪ್ಪ* 

ಶಂಕರಘಟ್ಟ, ಜ. 26: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರಚಿಸಿದ ಅತ್ಯಂತ ಸವಿಸ್ತಾರವಾದ, ಬಲಿಷ್ಠ, ಲಿಖಿತ ಸಂವಿಧಾನದಿಂದಾಗಿ ಬಹುಪ್ರದೇಶ, ಬಹುಸಂಸ್ಕೃತಿ, ಬಹುಜನರ ವೈವಿಧ್ಯಮಯ ಭಾರತವು ಇಂದು ಒಂದು ಬಲಿಷ್ಠ ದೇಶವಾಗಿ ಬೆಳೆದು ನಿಂತಿದೆ ಎಂದು ಕುವೆಂಪು ವವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ವಿವಿಯ ಪರೀಕ್ಷಾಂಗ ಭವನದ ಮುಂಭಾಗದಲ್ಲಿ ಬುಧವಾರ ಆಯೋಜಿಸಿದ್ದ 73ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತವು ಸ್ವಾತಂತ್ರದ ಮೊದಲು 500ಕ್ಕೂ ಹೆಚ್ಚು ಪ್ರಾಂತ್ಯಗಳಾಗಿ ಹರಿದು ಹಂಚಿಹೋಗಿತ್ತು. ಸರದಾರ್ ವಲ್ಲಭಾಯಿ ಪಟೇಲ್ ಅವೆಲ್ಲವನ್ನು ಒಗ್ಗೂಡಿಸಿದರು. ಅಂತಯೇ ಭಾರತ ದೇಶವು ನೂರಾರು ಭಾಷೆಗಳ, ಹತ್ತಾರು ಬಗೆಯ ಜನವರ್ಗ, ಧರ್ಮ, ಸಮುದಾಯಗಳಿಂದ ಕೂಡಿದ ದೇಶ. ಅವರೆಲ್ಲರನ್ನು ಒಂದು ಸೂರಿನಡಿ ತಂದು ಏಕತೆಯಿಂದ ದೇಶ ನಿರ್ಮಾಣ ಸಾಧ್ಯವಾದದ್ದು ಸಂವಿಧಾನದಿಂದ. ಭಾರತ ದೇಶವನ್ನು ಜನರ ರಾಜ್ಯವಾಗಿ ನಿರ್ಮಾಣ ಮಾಡಿದ ಈ ದಿನವನ್ನು ನಾವು ಸಂಭ್ರಮಿಸಬೇಕು ಎಂದರು.

ಭಾರತದ ಇತಿಹಾಸದಲ್ಲಿ ಸ್ವಾತಂತ್ರ ಹೋರಾಟ ಒಂದು ಮಹತ್ವದ ಘಟ್ಟವಾದರೆ, ದೇಶವನ್ನು ಒಗ್ಗೂಡಿಸಿ ಮುನ್ನಡೆಸುವ ಚಾಲಕ ಶಕ್ತಿಯಾದಂತಹ ಸಂವಿಧಾನ ರಚನೆ, ಅಂಗೀಕಾರ ಮತ್ತು ಅನುಷ್ಠಾನಗಳು ಮತ್ತೊಂದು ಪ್ರಮುಖ ಘಟ್ಟವೆಂದೇ ಪರಿಗಣಿಸಬೇಕು. ಅದರಿಂದಾಗಿಯೇ ಸ್ವಾತಂತ್ರ್ಯದ ಸಂದರ್ಭದಲ್ಲಿ ಇದ್ದಂತಹ ಬಡತನ, ಹಸಿವು, ನಿರುದ್ಯೋಗ, ಅನಕ್ಷರತೆಯಂತಹ ಸಮಸ್ಯೆಗಳನ್ನು ಹೋಗಲಾಡಿಸಿ ಅಭಿವೃದ್ಧಿಯುತ ದೇಶ ಕಟ್ಟಲು ಸಾಧ್ಯವಾಯಿತು. ಎಲ್ಲರ ಅಭ್ಯುದಯವನ್ನು ಪ್ರೇರೇಪಿಸುವ ಸಂವಿಧಾನವು ಬಲಿಷ್ಠ ರಾಜ್ಯಗಳು ಮತ್ತು ಬಲಿಷ್ಠ ಕೇಂದ್ರ ರಚನೆಗೆ ಅವಕಾಶ ನೀಡಿ ಸದೃಢ ದೇಶನಿರ್ಮಾಣಕ್ಕೆ ಬುನಾದಿ ಹಾಕಿದೆ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಎಂ. ತ್ಯಾಗರಾಜ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್ ಡಿ ವಿರೂಪಾಕ್ಷ ಸೇರಿದಂತೆ ವಿವಿಯ ಅಧ್ಯಾಪಕ-ಅಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

# # #

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.