ರೈತ ವಿರೋಧಿ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹ: ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ
ಶಿವಮೊಗ್ಗ: ಕೃಷಿಕ ಸಮಾಜವನ್ನು ವಿನಾಶದೆಡೆಗೆ ತಳ್ಳುವ ರೈತ ವಿರೋಧಿ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಇಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಭಾರತ ಕೃಷಿ ಪ್ರದಾನ ದೇಶ. ಸ್ವಾತಂತ್ರ್ಯದ ನಂತರ ರೈತರ ಪರವಾದ ಭೂ ಸುಧಾರಣಾ ಕಾನೂನುಗಳಿಂದ ರೈತರಿಗೆ, ದುಡಿಯುವ ವರ್ಗದ ಜನರಿಗೆ ಆಹಾರ ಭದ್ರತೆಗೆ ಅನುಕೂಲವಾಗಿತ್ತು. ಆದರೆ ಈಗ ಕೃಷಿ ಭೂಮಿಯನ್ನು ಬಂಡವಾಳಶಾಹಿ ಕಂಪೆನಿಗಳ ಕೈಗೆ ಸುಲಭವಾಗಿ ದಕ್ಕುವಂತೆ ಮಾಡುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ಮುಂತಾದ ಹೊಸ ರೈತ ವಿರೋಧಿಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದು ಇಡೀ ಕೃಷಿಯನ್ನೇ ನಾಶ ಮಾಡಲು ಹೊರಟಿದೆ ಎಂದು ಪ್ರತಿಭಟನಾಕಾರರು ದೂರಿದರು.
ರೈತ ವಿರೋಧಿ ಕಾಯ್ದೆಗಳನ್ನು ರದ್ದು ಮಾಡಲು ಆಗ್ರಹಿಸಿ ಈಗಾಗಲೇ ದೆಹಲಿಯಲ್ಲಿ ಕಳೆದ 12 ದಿನಗಳಿಂದ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆ ನಡೆಸಿ ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಇದನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ಬೆಂಬಲಿಸುತ್ತದೆ ಮತ್ತು ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸುತ್ತದೆ.
ಈಗಾಗಲೇ ಕೃಷಿಕ ಸಂಕಷ್ಟದಲ್ಲಿದ್ದಾನೆ. ಕೇಂದ್ರ ಸರ್ಕಾರ ಇದರ ಜೊತೆಗೆ ಕಾರ್ಪೋರೇಟ್ ದಣಿಗಳ ಅಡಿಯಾಳಾಗಿ ಮಾಡಲು ಹುನ್ನಾರ ನಡೆಸುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕಾನೂನುಗಳನ್ನು ರೂಪಿಸುವಾಗ ಸಂಸತ್‌ನಲ್ಲಿ ವಿರೋಧ ಪಕ್ಷಗಳಿಗೆ ಚರ್ಚೆಗೆ ಅವಕಾಶ ನೀಡಬೇಕು. ಆದರೆ ಹಾಗೆ ಮಾಡದೇ ಸುಗ್ರಿವಾಜ್ಞೆಗಳ ಮೂಲಕ ಕಾನೂನುಗಳನ್ನು ಜಾರಿಗೊಳಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಲಾಠಿ ಚಾರ್ಜ್ ಮಾಡಿಸಿ, ಜಲಫಿರಂಗಿ, ಹಸಿರುವಾಯು ಸಿಡಿಸಿರುವುದು ಖಂಡನೀಯ. ಸರ್ಕಾರ ಕೂಡಲೇ ರೈತರ ಕ್ಷಮೆ ಕೇಳಬೇಕು ಮತ್ತು ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ದೆಹಲಿಯತ್ತ ರೈತರು ಹೋರಾಟಕ್ಕೆ ಹೆಜ್ಜೆ ಇಡುತ್ತಾರೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಕೆ.ಟಿ.ಗಂಗಾಧರ್ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ಪ್ರೊ.ರಾಜೇಂದ್ರ ಚೆನ್ನಿ, ಮಾಲತೇಶ್ ಬೊಮ್ಮನಕ್ಟೆ, ಕಿರಣ್ ಕುಮಾರ್, ರವಿಹರಿಗೆ, ಲೋಕೇಶ್, ಹಾರೋಬೆನವಳ್ಳಿ ರಮೇಶ್, ಜಯರಾಮ್, ಕೆ.ಎಸ್.ರವಿ, ಚೈತನ್ಯ, ನಾಗೇಶನ್, ಟೀಕೋಜಿರಾವ್, ವಿಜಯ್ ಮುಂತಾದವರಿದ್ದರು.
Leave a Comment